ಬೀಜಿಂಗ್, ಸೆ.1(DaijiworldNews/HR): ಬೇರೆ ಯಾವುದೇ ದೇಶಗಳ ಪ್ರದೇಶವನ್ನೂ ಚೀನಾ ಆಕ್ರಮಿಸಿಲ್ಲ. ಸೇನೆ ಎಂದಿಗೂ ಗಡಿ ದಾಟಿ ಮುಂದೆ ಹೋಗಿಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ಹುವಾ ಚುನೈಂಗ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಚುನೈಂಗ್, ಪೂರ್ವ ಲಡಾಖ್ನ ಪಾಂಗಾಂಗ್ ಸರೋವರ ಬಳಿ ಯಥಾಸ್ಥಿತಿ ಉಲ್ಲಂಘಿಸುವ ಚೀನಾ ಸೇನೆಯ ಪ್ರಯತ್ನವನ್ನು ಭಾರತದ ಯೋಧರು ಹಿಮ್ಮೆಟ್ಟಿಸಿದ ವಿಷಯ ಬಹಿರಂಗವಾಗಿತ್ತು. ಆದರೆ ಚೀನಾ ಎಂದಿಗೂ ಯಾವುದೇ ಯುದ್ಧ ಅಥವಾ ಸಂಘರ್ಷವನ್ನು ಪ್ರಚೋದಿಸಿಲ್ಲ. ಇತರ ದೇಶದ ಭೂಪ್ರದೇಶದ ಒಂದು ಇಂಚನ್ನೂ ಆಕ್ರಮಿಸಿಕೊಂಡಿಲ್ಲ. ಚೀನಾದ ಸೇನೆ ಎಂದಿಗೂ ಗಡಿ ದಾಟಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಭಾರತದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ನಿಧನಕ್ಕೆ ಚುನೈಂಗ್ ಸಂತಾಪ ಸೂಚಸಿದರು. ಪ್ರಣಬ್ ಮುಖರ್ಜಿ ಭಾರತದ ಅನುಭವಿ ರಾಜಕಾರಣಿ. ತಮ್ಮ 50 ವರ್ಷಗಳ ರಾಜಕೀಯದಲ್ಲಿ ಅವರು ಚೀನಾ-ಭಾರತ ಸಂಬಂಧಗಳಿಗೆ ಸಕಾರಾತ್ಮಕ ಕೊಡುಗೆ ನೀಡಿದ್ದಾರೆ. ಇದು ಚೀನಾ-ಭಾರತ ಸ್ನೇಹಕ್ಕೆ ಭಾರತಕ್ಕೆ ಭಾರಿ ನಷ್ಟವಾಗಿದೆ. ಅವರ ನಿಧನಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ ಎಂದರು.
ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಚುಶುಲ್ ಎಂಬಲ್ಲಿ ಎರಡೂ ಕಡೆಯ ಬ್ರಿಗೇಡ್ ಕಮಾಂಡರ್ ಹಂತದ ಸಭೆ ಪ್ರಗತಿಯಲ್ಲಿದೆ. ಭಾರತದ ಸಾರ್ವಭೌಮತೆ ಮತ್ತು ಗಡಿ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಶಾಂತಿಯುತ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಭಾರತೀಯ ಸೇನೆ ಪ್ರತಿಪಾದಿಸಿದೆ.