ವಾಷಿಂಗ್ಟನ್, ಸೆ. 04 (DaijiworldNews/MB) : ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಮ್ಮೆ ಮೇಲ್ನಲ್ಲಿ ಹಾಗೂ ಮತ್ತೊಮ್ಮೆ ವೈಯಕ್ತಿಕವಾಗಿ ಎರಡು ಬಾರಿ ಮತ ಚಲಾಯಿಸಲು ಯತ್ನ ಮಾಡಿ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತ್ಯಂತ ನಿರ್ಣಾಯಕ ರಾಜಕೀಯ ಹೋರಾಟದ ಕಣವಾಗಿರುವ ಉತ್ತರ ಕರೊಲಿನಾದಲ್ಲಿನ ನಿವಾಸಿಗಳಲ್ಲಿ ಮನವಿ ಮಾಡಿದ್ದಾರೆ.
ಉತ್ತರ ಕರೊಲಿನಾ ಸೇರಿದಂತೆ ಹಲವು ರಾಜ್ಯದಲ್ಲಿ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸುವುದು ಹಾಗೂ ಪ್ರೇರೇಪಿಸುವುದು ಕಾನೂನು ಬಾಹಿರವಾದ ಹಿನ್ನೆಲೆ ಇದೀಗ ಟ್ರಂಪ್ ಮನವಿಯೂ ಅಮೇರಿಕಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಡೆಮಾಕ್ರಾಟ್ ರಾಜ್ಯ ಅಟಾರ್ನಿ ಜನರಲ್ ಜೋಶ್ ಸ್ಟೈನ್, ''ಟ್ರಂಪ್ ಅವರು ಉತ್ತರ ಕರೊಲಿನಾದ ಪ್ರಜೆಗಳನ್ನು ಚುನಾವಣೆಯ ಕಾನೂನು ಮರಿಯುವಂತೆ ಪ್ರಚೋಧನೆ ನೀಡಿದ್ದಾರೆ. ನೀವು ಮತ ಹಾಕಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಆದರೆ ಎರಡು ಬಾರಿ ಮತ ಚಲಾಯಿಸಬೇಡಿ. ನನ್ನ ಅಧಿಕಾರವಧಿಯಲ್ಲಿ ಜನರ ಇಚ್ಛೆಗೆ ಆದ್ಯತೆ ನೀಡುವ ಎಲ್ಲಾ ಕಾರ್ಯಗಳನ್ನು ನಾನು ಮಾಡುತ್ತೇನೆ'' ಎಂದು ಅವರು ಹೇಳಿದ್ದಾರೆ.
ಟ್ರಂಪ್ ಎರಡು ಬಾರಿ ಮತ ಹಾಕುವಂತೆ ಹೇಳಿಲ್ಲ ಎಂದು ಟ್ರಂಪ್ ಪ್ರಚಾರವನ್ನು ನೋಡಿಕೊಳ್ಳುತ್ತಿರುವ ಶ್ವೇತ ಭವನವು ನಿರಾಕರಿಸಿದೆ. ಆ ಬೆನ್ನಲ್ಲೇ ಗುರುವಾರ ಬೆಳಗ್ಗೆ ಮತ್ತೊಮ್ಮ ಸರಣಿ ಟ್ವೀಟ್ ಮಾಡಿರುವ ಟ್ರಂಪ್ ಮೇಲ್ ಮೂಲಕ ಹಾಗೂ ವೈಯಕ್ತಿಕವಾಗಿ ಮತ ಹಾಕುವಂತೆ ಮನವಿ ಮಾಡಿದ್ದಾರೆ.
ಇನ್ನು ಕೊರೊನಾ ಕಾರಣದಿಂದಾಗಿ ಕೆಲವು ರಾಜ್ಯಗಳಲ್ಲಿ ವಿಸ್ತರಿಸಿರುವ ಮೇಲ್ ಇನ್ ಮತದಾನವು ಮತ್ತಷ್ಟು ವಂಚನೆಯನ್ನು ಹೆಚ್ಚಿಸುತ್ತದೆ ಹಾಗೂ ನವೆಂಬರ್ ಚುನಾವಣೆಯನ್ನು ಅಡ್ಡಿಪಡಿಸುತ್ತದೆ ಎಂದು ಟ್ರಂಪ್ ಹಲವು ಬಾರಿ ಪ್ರತಿಪಾದಿಸಿದ್ದಾರೆ.