ರೋಮ್, ಸೆ 07 (DaijiworldNews/PY): ಫ್ರೆಂಚ್ ಪ್ರವಾಸಿಗನೊಬ್ಬ ಸಾರ್ಡಿನಿಯಾ ಬೀಚ್ನಿಂದ ಎರಡು ಕೆ.ಜಿ ಮರಳು ಕದ್ದ ಕಾರಣ ಆತನಿಗೆ 890 ಪೌಂಡ್(86,633 ರೂ) ದಂಡ ವಿಧಿಸಿದ್ದಾರೆ.
ಇಟಲಿ ದೇಶಕ್ಕೆ ಸೇರಿದ ದೊಡ್ಡ ದ್ವೀಪ ಇದಾಗಿದೆ. ಫ್ರಾನ್ಸ್ ಪ್ರವಾಸಿಗನ ಬ್ಯಾಗ್ನಲ್ಲಿ ಎರಡು ಕೆ.ಜಿ ತೂಕದ ಮರಳು ಪತ್ತೆಯಾದ ಕಾರಣ ಆತನಿಗೆ ದಂಡ ವಿಧಿಸಿಲಾಗಿದೆ.
ಇಟಾಲಿಯನ್ ದ್ವೀಪದ ಬಿಳಿ ಮರಳು ಹೆಚ್ಚು ವಿಶಿಷ್ಟವಾಗಿದ್ದು, ಈ ಬೀಚ್ನ ರಕ್ಷಣೆಯನ್ನು ಸಾರ್ಡಿನಿಯಾದ ಅಧಿಕಾರಿಗಳು ಮಾಡುತ್ತಿದ್ದಾರೆ. ಸ್ಪಲ್ಪ ಪ್ರಮಾಣದಲ್ಲಿ ಮರಳನ್ನು ಕಳ್ಳಸಾಗಣೆ ಮಾಡಿದರೆ ಭಾರಿ ದಂಡವನ್ನು ಹಾಗೂ ಒಂದರಿಂದ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಈ ದ್ವೀಪದಲ್ಲಿರುವ ಸುಂದರ ಕಡಲತೀರಗಳು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತದೆ. ಸಾರ್ಡಿನಿಯಾ ಕಡಲತೀರದಲ್ಲಿ ಕಡೆಲ್ಕೊರೆತ ಕೂಡಾ ಸಂಭವಿಸುತ್ತದೆ ಎನ್ನಲಾಗಿದೆ.
ಈ ರೀತಿಯಾಗಿ ದಂಡ ವಿಧಿಸುತ್ತಿರುವ ಇದೇ ಮೊದಲ ಬಾರಿಯಲ್ಲ. ಕಳೆದ ವರ್ಷ ಫ್ರೆಂಚ್ ದಂಪತಿಗಳು 14 ಬಾಟಲಿಯಲ್ಲಿ ಮರಳನ್ನು ಸಂಗ್ರಹಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ನಮಗೆ ಮರಳು ಸಂಗ್ರಹ ಮಾಡುವುದ ಅಪರಾಧ ಎನ್ನುವ ಬಗ್ಗೆ ತಿಳಿದಿರಲಿಲ್ಲ ಎಂದಿದ್ದರು.
ಇನ್ನು ಸಾರ್ಡಿನಿಯನ್ ಕಡಲತತೀರಗಳಿಂದ ಬೆಣಚು ಕಲ್ಲುಗಳನ್ನು ಕೂಡಾ ಸಾಗಿಸುವುದ ಕಾನೂನುಬಾಹಿರವಾಗಿ ಎಂದು 2017ರಲ್ಲಿ ಘೋಷಣೆ ಮಾಡಲಾಗಿದೆ. ಈ ನಿರ್ಬಂಧವು ಇಟಾಲಿಯನ್ ದ್ವೀಪಕ್ಕೆ ಮಾತ್ರ ಸೀಮಿತವಾಗಿಲ್ಲ, ಹವಾಯಿಯ ಕಡಲತೀರದಿಂದ ಮರಳು ತೆಗೆದರೆ 1 ಲಕ್ಷ ಡಾಲರ್ ದಂಡ ವಿಧಿಸಲಾಗುತ್ತದೆ. ಇನ್ನು ಇಂಗ್ಲೆಂಡ್ನಲ್ಲಿ 1947ರ ಕರಾವಳಿ ಸಂರಕ್ಷಣಾ ಕಾಯ್ದೆಯ ಅಡಿ 1 ಸಾವಿರ ಪೌಂಡ್ ದಂಡ ವಿಧಿಸಲಾಗುತ್ತದೆ.