ಜಿನೀವಾ, ಸೆ. 8(DaijiworldNews/HR): ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ. ಇಂತಹ ಹಲವು ಸಾಂಕ್ರಾಮಿಕಗಳಿಗೆ ಜಗತ್ತು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಿದ್ಧವಾಗಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೇಯೆಸಸ್ ಈ ಬಗ್ಗೆ ಮಾತನಾಡಿ, ಕೊರೊನಾ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ. ಇಂತಹ ಹಲವು ಸಾಂಕ್ರಾಮಿಕಗಳು ಭವಿಷ್ಯದಲ್ಲಿ ಜಗತ್ತನ್ನು ಪೀಡಿಸಬಹುದು. ಹೀಗಾಗಿ ಭವಿಷ್ಯದ ಬಿಕ್ಕಟ್ಟುಗಳಿಗೆ ವಿಶ್ವದಾದ್ಯಂತ ದೇಶಗಳು ಸಿದ್ಧರಾಗಿರಬೇಕು. ಇದು ಮಾತ್ರವಲ್ಲ, ನಾವು ಯಾವುದೇ ಸಮಸ್ಯೆಯನ್ನು ನಿಭಾಯಿಸಬಹುದು, ಇದಕ್ಕಾಗಿ ಎಲ್ಲಾ ದೇಶಗಳು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗಗಳು ಜೀವನದ ಒಂದು ಭಾಗ ಎಂಬುದನ್ನು ಇತಿಹಾಸ ನಮಗೆ ಕಲಿಸಿದೆ. ಆದರೆ ಮುಂದಿನ ಬಾರಿ ಸಾಂಕ್ರಾಮಿಕ ರೋಗ ಬಂದಾಗ, ನಾವೆಲ್ಲರೂ ಅದಕ್ಕೆ ಸಿದ್ಧರಾಗಿರಬೇಕು. ತಂತ್ರಜ್ಞಾನಗಳಲ್ಲಿ ಹೆಚ್ಚಿನ ಪ್ರಗತಿಯ ಹೊರತಾಗಿಯೂ, ಅನೇಕ ದೇಶಗಳು ಇನ್ನೂ ತಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಸರಿಯಾದ ದಿಕ್ಕಿನಲ್ಲಿ ಗಮನಹರಿಸಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇಶಗಳು ಸಾರ್ವಜನಿಕ ಆರೋಗ್ಯ ಸೇವೆಗಾಗಿ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ ಎಂದು ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.