ಮಾಸ್ಕೊ, ಸೆ 08 (DaijiworldNews/PY): ರಷ್ಯಾ ತನ್ನ ಕೊರೊನಾ ಲಸಿಕೆಯ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆಯನ್ನು ನಾಗರಿಕರಿಗಾಗಿ ಮಂಗಳವಾರ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ವಿತರಣೆಯನ್ನು ಯೋಜಿಸಿದೆ ಎಂದು ಆರೋಗ್ಯ ಸಚಿವಾಲಯ ಹೇಳಿರುವುದಾಗಿ ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಗಮೆಲಿಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಹಾಗೂ ಮೈಕ್ರೋಬಯಾಲಜಿ ಅಭಿವೃದ್ದಿಪಡಿಸಿದ ಸ್ಪುಟ್ನಿಕ್ ಲಸಿಕೆಯ ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೇ, ಮೊದಲ ಹಂತದ ಲಸಿಕೆಯನ್ನು ನಾಗರಿಕರಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಗರದ ಬಹುಪಾಲು ಜನರಿಗೆ ಈ ಲಸಿಕೆಯನ್ನು ಕೆಲವೇ ತಿಂಗಳುಗಳಲ್ಲಿ ನೀಡಲಾಗುವುದು ಎಂದು ಮಾಸ್ಕೋ ಮೇಯರ್ ಸೆರ್ಗೆ ಸೊಬಯಾನಿನ್ ಭಾನುವಾರ ತಿಳಿಸಿದ್ದರು.