ಬೀಜಿಂಗ್, ಸೆ. 10 (DaijiworldNews/MB) : ವಿಶ್ವದಲ್ಲೇ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡ ಚೀನಾದ ವುಹಾನ್ನಲ್ಲಿ ಹೆಚ್ಚಿನ ಬೆಕ್ಕುಗಳು ಕೂಡಾ ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಬೆಕ್ಕುಗಳಲ್ಲಿ ಸೋಂಕಿನ ವಿರುದ್ದ ಹೋರಾಡುವ ಪ್ರತಿಕಾಯಗಳು ಇದ್ದ ಹಿನ್ನೆಲೆ ಬೆಕ್ಕುಗಳಿಗೆ ಸೋಂಕು ತಗುಲುವುದಿಲ್ಲ ಎಂದು ನಂಬಲಾಗಿತ್ತು. ಆದರೆ ಪರೀಕ್ಷೆಗೆ ನಡೆಸಿದಾಗ ಪ್ರತಿಕಾಯ ಶಕ್ತಿ ಇರುವ ಬೆಕ್ಕುಗಳೂ ಕೂಡಾ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಹೌಝೋಂಗ್ ಕೃಷಿ ವಿಶ್ವವಿದ್ಯಾಲಯ ನಡೆಸಿರುವ ಸಂಶೋಧನೆ ತಿಳಿಸಿದೆ.
ಹೌಝೋಂಗ್ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ವುಹಾನ್ನ ವಿವಿಧ ಭಾಗಗಳಲ್ಲಿನ 102 ಬೆಕ್ಕುಗಳ ರಕ್ತದ ಮಾದರಿಯೊಂದಿಗೆ ಮೂಗು ಹಾಗೂ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿದ್ದು ಮೂರು ಪ್ರಾಣಿಗಳ ಆಶ್ರಯ ತಾಣದಿಂದ 46 ಬೆಕ್ಕುಗಳು, ಐದು ಸಾಕುಪ್ರಾಣಿಗಳ ಆಸ್ಪತ್ರೆಯಿಂದ 41 ಬೆಕ್ಕುಗಳು ಮತ್ತು ಕೋವಿಡ್ 19 ಸೋಂಕಿತ ರೋಗಿಗಳಿರುವ ಮನೆಯಿಂದ 15 ಬೆಕ್ಕುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಕೊರೊನಾ ಸೋಂಕಿತರು ಇರುವ ಮನೆಯಲ್ಲಿನ 15 ಬೆಕ್ಕುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಕೊರೊನಾ ಸೋಂಕಿನ ವಿರುದ್ದ ಹೋರಾಡುವ ಪ್ರತಿಕಾಯಗಳು ಪತ್ತೆಯಾಗಿದೆ. ಆ ಪೈಕಿ 11 ಬೆಕ್ಕುಗಳಲ್ಲಿ ವೈರಸ್ ನಿಷ್ಕ್ರಿಯಗೊಳಿಸುವ ಪ್ರತಿಕಾಯಗಳು ಇರುವುದು ತಿಳಿದು ಬಂದಿದೆ. ಆದರೆ ಈ ಬೆಕ್ಕುಗಳಿಗೂ ಸೋಂಕು ತಗುಲುವ ಸಾಧ್ಯತೆಯಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ. ಆದರೆ ಯಾವ ಬೆಕ್ಕಿನಲ್ಲಿಯೂ ಸೋಂಕು ಇರುವುದು ದೃಡಪಟ್ಟಿಲ್ಲ ಎಂದು ಈ ಸಂಶೋಧನಾ ವರದಿ ತಿಳಿಸಿದೆ.