ಗ್ರಿಡ್ಲೆ, ಸೆ 11 (DaijiworldNews/PY): ಉತ್ತರ ಕ್ಯಾಲಿಫೋರ್ನಿಯಾದ ಅರಣ್ಯ ಪ್ರದೇಶವೊಂದರಲ್ಲಿ ಉಂಟಾದ ಕಾಳ್ಗಿಚ್ಚಿನ ಜ್ವಾಲೆಗೆ 10 ಮಂದಿ ಮೃತಪಟ್ಟಿದ್ದು, 16 ಜನ ಕಾಣೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಉಂಟಾದ ಕಾಳ್ಗಿಚ್ಚು ಅತ್ಯಂತ ಮಾರಕವಾದ ಅವಘಡವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕಾಣೆಯಾದವರ ಶೋಧ ಕಾರ್ಯ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಈ ವಾರದ ಆರಂಭದಲ್ಲಿ ನಾರ್ತ್ ಕಾಂಪ್ಲೆಕ್ಸ್ನಿಂದ ಆರಂಭವಾದ ಬೆಂಕಿಯ ಜ್ವಾಲೆ ಶುಕ್ರವಾರದಂದು ಎಲ್ಲೆಡೆ ಪಸರಿಸಿದ್ದು, ನಂತರ ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡುತ್ತಿದ್ದಾರೆ. ಬೆಂಕಿಯ ಹೊಗೆಯಿಂದ ಹೆಲಿಕಾಫ್ಟರ್ ಮೂಲಕ ಬೆಂಕಿ ನಂದಿಸುತ್ತಿರುವವರಿಗೆ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋದ ಈಶಾನ್ಯದ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 2,000 ಕಟ್ಟಡಗಳು ನಾಶಗೊಂಡಿತ್ತು.