ಬೀಜಿಂಗ್, ಸೆ.14(DaijiworldNews/HR): ಚೀನಾದ ವುಹಾನ್ ನಗರದಲ್ಲಿರುವ ಸರಕಾರಿ ನಿಯಂತ್ರಿತ ಪ್ರಯೋಗಾಲಯದಲ್ಲಿ ಕೊರೊನಾ ವೈರಸ್ ಅನ್ನು ತಯಾರಿಸಲಾಗಿತ್ತು ಹಾಗೂ ಈ ಕುರಿತಂತೆ ತನ್ನ ಬಳಿ ವೈಜ್ಞಾನಿಕ ಆಧಾರವಿದೆ ಎಂದು ಚೀನಾದ ವೈರಾಣು ರೋಗ ತಜ್ಞೆ ಡಾ ಲಿ-ಮೆಂಗ್ ಯನ್ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಕುರಿತಂತೆ ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಮುನ್ನ ಚೀನಾ ಸರಕಾರ ಅದನ್ನು ಮುಚ್ಚಿ ಹಾಕುವ ಯತ್ನ ನಡೆಸಿತ್ತೆಂದು ತಮ್ಮ ತನಿಖೆಯಿಂದ ತಿಳಿದು ಬಂದಿದೆ ಎಂಬುದಾಗಿ ಹಾಂಕಾಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿ-ಮೆಂಗ್ ಯನ್ ಅವರು ಹೇಳಿದ್ದಾರೆ.
ಇನ್ನು ಈ ಬಗ್ಗೆ ಯುಟ್ಯೂಬ್ನಲ್ಲಿ ವೀಡಿಯೋ ಬಿಡುಗಡೆಗೊಳಿಸಿರುವ ಲಿ-ಮೆಂಗ್, ಕೊರೊನಾ ವೈರಸ್ ಚೀನಾದ ವೈರಾಲಜಿ ಲ್ಯಾಬ್ ನಿಂದ ಬಂದಿದೆಯೇ ಹೊರತು ಅಲ್ಲಿನ ಪ್ರಾಣಿ ಮಾರುಕಟ್ಟೆಯಿಂದಲ್ಲ ಎಂಬುದನ್ನು ತಿಳಿಸಿದ್ದಾರೆ. ಐಟಿವಿಯ ಲೂಸ್ ವಿಮೆನ್ ಟಾಕ್ ನಲ್ಲಿ ಕಾಣಿಸಿಕೊಂಡಾಗಲೂ ಲಿ-ಮೆಂಗ್ ಈ ಕುರಿತು ಹೇಳಿಕೊಂಡಿದ್ದಾರೆ. ಹಾಂಕಾಂಗ್ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ ನಲ್ಲಿ ಕಾರ್ಯನಿರ್ವಹಿಸುವ ಲಿ-ಮೆಂಗ್ ಯನ್ ಅವರು ಚೀನಾದಿಂದ ಸುರಕ್ಷತೆಯ ದೃಷ್ಟಿಯಿಂದ ಅಮೆರಿಕಾಗೆ ವಲಸೆ ಹೋಗಿದ್ದರೆಂದೂ ಕಾರ್ಯಕ್ರಮದ ವೇಳೆ ಹೇಳಲಾಗಿದೆ.
ಇನ್ನು ಚೀನಾದ ಅಧಿಕಾರಿಗಳು ಲಿ-ಮೆಂಗ್ ಸಂಗ್ರಹಿಸಿದ್ದ ಎಲ್ಲಾ ಮಾಹಿತಿಯನ್ನು ಅವರು ದೇಶ ಬಿಟ್ಟು ಹೋಗುವ ಮುಂಚೆ ಅಳಿಸಿ ಹಾಕಿದ್ದರಲ್ಲದೆ ತನ್ನ ವಿರುದ್ಧ ವದಂತಿಗಳನ್ನು ಹರಡುವಂತೆಯೂ ಜನರಿಗೆ ಸೂಚಿಸಿದ್ದರೆಂದೂ ಆಕೆ ಆರೋಪಿಸಿದ್ದಾರೆ. ಆದರೆ ಆಕೆ ಕೊರೊನಾ ವೈರಸ್ ಹುಟ್ಟಿನ ಕುರಿತು ನೀಡಿರುವ ಹೇಳಿಕೆಯನ್ನು ಚೀನಾದ ನ್ಯಾಷನಲ್ ಹೆಲ್ತ್ ಮಿಷನ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಹಾಂಕಾಂಗ್ ವಿವಿ ತಳ್ಳಿ ಹಾಕಿದೆ.