ವಾಷಿಂಗ್ಟನ್,ಸೆ.15(DaijiworldNews/HR): ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ನನ್ನನ್ನು ಗೆಲ್ಲಿಸಿದರೆ ಹವಾಮಾನ ಬದಲಾವಣೆ ವಿರುದ್ಧ ಹೋರಾಟಕ್ಕಾಗಿ ವಿವಿಧ ದೇಶಗಳು ಮಾಡಿಕೊಂಡಿರುವ ಐತಿಹಾಸಿಕ ‘ಪ್ಯಾರಿಸ್ ಒಪ್ಪಂದ’ದಲ್ಲಿ ಅಮೇರಿಕವನ್ನು ಮರು ಸೇರ್ಪಡೆ ಮಾಡುತ್ತೇನೆ’ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಭರವಸೆ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿದ್ದು, ಮಿತ್ರ ರಾಷ್ಟ್ರಗಳ ಜತೆಗೂ ಉತ್ತಮ ಬಾಂಧವ್ಯ ಉಳಿಸಿಕೊಂಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಪ್ಯಾರಿಸ್ ಒಪ್ಪಂದದಲ್ಲಿ ಅಮೇರಿಕವನ್ನು ಮರುಸೇರ್ಪಡೆಗೊಳಿಸುವ ಜತೆಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹೊಸ ಮಾನದಂಡಗಳನ್ನು ರೂಪಿಸಲು ಪ್ರಯತ್ನಿಸುತ್ತೇನೆ’ ಎಂದು ಬೈಡನ್ ತಿಳಿಸಿದ್ದಾರೆ.
ಇನ್ನು ಕಾಳ್ಗಿಚ್ಚಿನಿಂದ ಹಾನಿಗೊಳಗಾಗಿದ್ದ ಕ್ಯಾಲಿಫೋರ್ನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ್ದ ಟ್ರಂಪ್, ‘ವಿಜ್ಞಾನದಿಂದ ಎಲ್ಲವೂ ತಿಳಿಯಲಿದೆ ಎಂದು ನಾನು ಭಾವಿಸುವುದಿಲ್ಲ’ ಎಂದಿದ್ದು, ಅದಕ್ಕೆ ಪ್ರತಿಕ್ರಿಯಿಸುತ್ತಾ ಟ್ರಂಪ್ ವಿರುದ್ಧ ಹರಿಹಾಯ್ದಿರುವ ಜೊ ಬೈಡನ್, ‘ಇನ್ನೂ ನಾಲ್ಕು ವರ್ಷ ಹವಾಮಾನ ಬದಲಾವಣೆಯನ್ನು ನಿರಾಕರಿಸುತ್ತಾ ಶ್ವೇತಭವನದಲ್ಲಿ ಕುಳಿತುಕೊಂಡರೆ ಅಮೇರಿಕದ ಬಹುಪಾಲು ಭಾಗವು ನೀರಿನಲ್ಲಿ ಮುಳುಗಿಹೋಗದಿರದು. ಆಗ ಇದನ್ನು ಕಂಡು ಯಾರಿಗೂ ಅಚ್ಚರಿಯೂ ಆಗದು. ವಿಜ್ಞಾನವನ್ನು ಗೌರವಿಸುವ ಹಾಗೂ ಹವಾಮಾನ ಬದಲಾವಣೆಯಿಂದ ಈಗಾಗಲೇ ಆಗಿರುವ ಹಾನಿಯ ಬಗ್ಗೆ ಅರಿವಿರುವ ಅಧ್ಯಕ್ಷರು ನಮಗೆ ಬೇಕಿದೆ’ ಎಂದು ಹೇಳಿದ್ದಾರೆ.