ವಾಷಿಂಗ್ಟನ್, ಸೆ. 17 (DaijiworldNews/MB) : ಇತ್ತೀಚೆಗೆ ಅಮೇರಿಕಾದ ಸೋಂಕು ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕ ರಾಬೆರ್ಟ್ ರೆಡ್ಫೀಲ್ಡ್ ಅವರು ಮಾಸ್ಕ್ ಧರಿಸುವುದು ಲಸಿಕೆಗಿಂತಲೂ ಹೆಚ್ಚು ಪರಿಣಾಮಕಾರಿ ಎಂದು ಹೇಳಿದ್ದು ಇದೀಗ ಇದಕ್ಕೆ ತದ್ವಿರುದ್ದವಾದ ಹೇಳಿಕೆ ನೀಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸುವುದು ಲಸಿಕೆಯಷ್ಟು ಪರಿಣಾಮಕಾರಿಯಲ್ಲ ಎಂದು ಹೇಳಿದ್ದಾರೆ.
ರಾಬೆರ್ಟ್ ರೆಡ್ಫೀಲ್ಡ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ''ನಾವು ಕೊರೊನಾ ಲಸಿಕೆಗಿಂತಲೂ ಮಾಸ್ಕ್ ಧರಿಸುವುದು ಉತ್ತಮವೆಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಲಸಿಕೆಯಿಂದಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಶೇ. 70ರಷ್ಟು ಅಧಿಕಗೊಳಿಸಬಹುದು. ರೋಗ ನಿರೋಧಕ ಶಕ್ತಿ ಅಧಿಕವಾಗದಿದ್ದರೆ ಲಸಿಕೆಯೂ ನಮ್ಮನ್ನು ಕಾಪಾಡಲಾಗದು. ಆದರೆ ಮಾಸ್ಕ್ ಧರಿಸುವುದು ಲಸಿಕೆಗಿಂತಲೂ ಹೆಚ್ಚು ಪರಿಣಾಮಕಾರಿ'' ಎಂದು ಹೇಳಿದ್ದರು.
ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ರಂಪ್, ''ಯಾವುದೇ ರೀತಿಯಲ್ಲೂ ಮಾಸ್ಕ್ ಲಸಿಕೆಗಿಂತ ಪರಿಣಾಮಕಾರಿಯಲ್ಲ. ಈ ಬಗ್ಗೆ ರಾಬರ್ಟ್ ಅವರನ್ನು ಕರೆದು ಮಾತನಾಡಿದ್ದೇನೆ. ಅವರಿಗೆ ಸಂದರ್ಶನದಲ್ಲಿ ಕೇಳಿರುವ ಪ್ರಶ್ನೆ ಅರ್ಥವಾಗಿಲ್ಲ. ಅವರಿಗೆ ಲಸಿಕೆ ಮಾಸ್ಕ್ಗಿಂತ ಹೆಚ್ಚು ಪರಿಣಾಮಕಾರಿ ಎಂದು ತಿಳಿದಿದೆ. ಮಾಸ್ಕ್ನ್ಲಲಿಯೂ ತೊಂದರೆ ಉಂಟಾಗುತ್ತದೆ. ಅದನ್ನು ಬಹಳ ಎಚ್ಚರಿಕೆಯಿಂದ ಉಪಯೋಗಿಸಬೇಕು. ಮಾಸ್ಕ್ ಲಸಿಕೆಯನ್ನು ಮುಖ್ಯವಾದದ್ದು ಅಲ್ಲ. ಜನರು ಕೂಡಾ ಮಾಸ್ಕ್ ಧರಿಸುವುದನ್ನು ಇಚ್ಛಿಸುವುದಿಲ್ಲ'' ಎಂದು ಹೇಳಿದ್ದಾರೆ.