ಮಾಸ್ಕೋ, ಸೆ. 17 (DaijiworldNews/MB) : ವಿಶ್ವದಲ್ಲೇ ಮೊದಲ ಕೊರೊನಾ ಲಸಿಕೆ ಎಂದು ಹೇಳಿಕೊಂಡಿರುವ ರಷ್ಯಾ ತಾನು ತಯಾರಿಸಿದ ಸ್ಪುಟ್ನಿಕ್-V ಕೊರೊನಾ ಲಸಿಕೆಗೆ ಭಾರತದಲ್ಲಿ ಒಪ್ಪಿಗೆ ದೊರೆತರೆ 10 ಕೋಟಿ ಡೋಸ್ಗಳನ್ನು ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಗೆ ಮಾರಾಟ ಮಾಡುವುದಾಗಿ ರಷ್ಯಾದ ಸಾವರಿನ್ ವೆಲ್ತ್ ಫಂಡ್ ಹೇಳಿದೆ.
ಭಾರತದಲ್ಲಿ ಈ ಲಸಿಕೆಯ ಪ್ರಯೋಗ ಇನ್ನಷ್ಟೇ ನಡೆಯಬೇಕಿದ್ದು ಇಲ್ಲಿನ ಕಂಪನಿಯ ಸಹಯೋಗದೊಂದಿಗೆ ಲಸಿಕೆಯ ಪ್ರಯೋಗ ನಡೆಸಲು ರಷ್ಯಾ ತೀರ್ಮಾನಿಸಿದೆ.
ಲಸಿಕೆಗೆ ಸಂಬಂಧಿಸಿದಂತೆ 'ರಷ್ಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್' ಕಝಕಿಸ್ತಾನ್, ಬ್ರೆಜಿಲ್ ಮತ್ತು ಮೆಕ್ಸಿಕೋದ ಜೊತೆ ಒಪ್ಪಂದ ಮಾಡಿಕೊಂಡಿದ್ದು ಈ ಲಸಿಕೆಯ 30 ಕೋಟಿ ಡೋಸ್ ತಯಾರಿಕೆ ಭಾರತದ ಜೊತೆ ಪಾಲುದಾರಿಕೆಯ ಒಪ್ಪಂದವನ್ನೂ ಮಾಡಿಕೊಂಡಿದೆ.
ಇನ್ನು ಈ ಲಸಿಕೆಯ ಮೂರನೇ ಹಂತದ ಪ್ರಯೋಗ ರಷ್ಯಾದಲ್ಲಿ ಆಗಸ್ಟ್ 26ರಂದು ಆರಂಭವಾಗಿದ್ದು ಇದರಲ್ಲಿ 40,000 ಸ್ವಯಂ ಸೇವಕರು ಭಾಗವಹಿಸಲಿದ್ದಾರೆ. ಇದಿನ್ನೂ ಪೂರ್ಣಗೊಂಡಿಲ್ಲ ಎಂದು ವರದಿಯಾಗಿದೆ.