ವಾಷಿಂಗ್ಟನ್, ಸೆ 18 (DaijiworldNews/PY): ಯುರೋಪ್ನ ಹಲವು ರಾಷ್ಟ್ರಗಳಲ್ಲಿ ಹಿಜ್ಬುಲ್ಲಾ ಉಗ್ರ ಸಂಘಟನೆಯು ಸ್ಪೋಟಕ ವಸ್ತುಗಳನ್ನು ಸಂಗ್ರಹ ಮಾಡುತ್ತಿದೆ. ಹಾಗಾಗಿ ಈ ಸಂಘಟನೆಯ ಮೇಲೆ ನಿಷೇಧ ಹೇರಬೇಕು ಎಂದು ಅಮೆರಿಕದ ಭಯೋತ್ಪಾದನಾ ನಿಗ್ರಹ ಘಟಕದ ಸಂಯೋಜಕ ನೇಥನ್ ಸೇಲ್ಸ್ ಹೇಳಿದ್ದಾರೆ.
ಅಮೆರಿಕದ ಜೆವಿಶ್ ಸಮಿತಿ ಆಯೋಜಿಸಿದ್ದ ಆನ್ಲೈನ್ ಫೋರಂ ಉದ್ದೇಶಿಸಿ ಮಾತನಾಡಿದ ನೇಥನ್ ಅವರು, ಹಿಜ್ಬುಲ್ಲಾ ಕಾರ್ಯಕರ್ತರು ಇತ್ತೀಚಿನ ವರ್ಷಗಳಲ್ಲಿ ಬೆಲ್ಜಿಯಂನಿಂದ ಫ್ರಾನ್ಸ್, ಗ್ರೀಸ್, ಇಟಲಿ, ಸ್ಪೇನ್ ಮತ್ತು ಸ್ವಿಟ್ಜರ್ಲೆಂಡ್ಗೆ ಅಮೋನಿಯಂ ನೈಟ್ರೇಟ್ ಅನ್ನು ಸಾಗಣೆ ಮಾಡುತ್ತಿದ್ದು, ಹಾಗೂ ಯುರೋಪಿನಾದ್ಯಂತ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಮೋನಿಯಂ ನೈಟ್ರೇಟ್ ರಾಸಾಯನಿಕ ಸಂಯುಕ್ತವಾಗಿದ್ದು ಇದನ್ನು ಸಾಮಾನ್ಯವಾಗಿ ರಸಗೊಬ್ಬರವಾಗಿ ಬಳಸಲಾಗುತ್ತದೆ. ಆದರೆ ಇದನ್ನು ಸ್ಫೋಟಕಗಳ ತಯಾರಿಕೆಗೆ ಬಳಸಲಾಗುತ್ತದೆ. ಕಳೆದ ತಿಂಗಳು ಲೆಬನಾನಿನ ರಾಜಧಾನಿ ಬೈರುತ್ನಲ್ಲಿ ಸಂಭವಿಸಿದ ಭಾರಿ ಸ್ಫೋಟವಾಗಿದ್ದಕ್ಕೆ ಇದು ಒಂದು ನಿದರ್ಶನವಾಗಿದೆ.
ಹಿಜ್ಬುಲ್ಲಾ 2012 ರಿಂದ ಯುರೋಪಿನಾದ್ಯಂತ ಅಮೋನಿಯಂ ನೈಟ್ರೇಟ್ ಅನ್ನು ಪ್ರಥಮ ಚಿಕಿತ್ಸಾ ಕಿಟ್ಗಳಲ್ಲಿ ಸಾಗಿಸುತ್ತಿದ್ದಾರೆ. ಈ ಸರಬರಾಜು ಯುರೋಪಿನಾದ್ಯಂತ, ಬಹುಶಃ ಗ್ರೀಸ್, ಇಟಲಿ ಮತ್ತು ಸ್ಪೇನ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ರಾಸಾಯನಿಕವನ್ನು ಸಂಗ್ರಹಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಹಿಜ್ಬೊಲ್ಲಾ, ಯುರೋಪಿಯನ್ ನೆಲದಲ್ಲಿ ಅಮೋನಿಯಂ ನೈಟ್ರೇಟ್ ಅನ್ನು ಏಕೆ ಸಂಗ್ರಹಿಸುತ್ತದೆ?. ಇದಕ್ಕೆ ಉತ್ತರ ದೊರಕಿದೆ. ಅಗತ್ಯದ ಸಂದರ್ಭದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಅನುವಾಗುವ ಕಾರಣಕ್ಕಾಗಿ ಈ ಸಂಘಟನೆಯು ಸ್ಪೋಟದ ದಾಸ್ತಾನು ಹೊಂದಿದೆ ಎಂದು ತಿಳಿಸಿದ್ದಾರೆ.
ಅಮೆರಿಕ 1997 ರಿಂದ ಹಿಜ್ಬೊಲ್ಲಾವನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದಿದ್ದು, ಆದರೆ ಸಂಘಟನೆಯ ರಾಜಕೀಯ ವಿಭಾಗದ ಮೇಲೆ ನಿಷೇಧ ಹೇರಿಲ್ಲ ಎಂದಿದ್ದಾರೆ.