ಇಸ್ಲಾಮಾಬಾದ್, ಸೆ 21(Daijiworld News/PY): ಪ್ರಧಾನಿ ಸ್ಥಾನಕ್ಕೆ ಶೀಘ್ರವೇ ಇಮ್ರಾನ್ ಖಾನ್ ಅವರು ರಾಜೀನಾಮೆ ನೀಡಬೇಕು ಎಂದು ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷಗಳು ಆಗ್ರಹಿಸಿವೆ.
ಈ ಬಗ್ಗೆ ಚರ್ಚೆ ನಡೆಸಲು ಭಾನುವಾರ ಸಭೆ ನಡೆಸಿದ್ದು, 26 ಅಂಶಗಳಿರುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.ಈ ಸಭೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ, ಪಾಕಿಸ್ತಾನ್ ಮುಸ್ಲೀಂ ಲೀಗ್-ನವಾಜ್, ಜಮಾಯಿತ್ ಉಲೆಮಾ ಇ ಇಸ್ಲಾ ಫಾಜಿಲ್ ಸೇರಿದಂತೆ ಇತರ ಪಕ್ಷಗಳು ಪಾಲ್ಗೊಂಡಿದ್ದವು.
ಸರ್ವ ಪಕ್ಷಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಯುಐ-ಎಫ್ ಮುಖ್ಯಸ್ಥ ಮುಲಾನಾ ಫಾಜಿಲ್ ಉರ್ ರೆಹಮಾನ್ ಅವರು, ಈ ನಿರ್ಣಯವನ್ನು ಓದಿದರು ಮತ್ತು ವಿರೋಧ ಪಕ್ಷಗಳು ಪಾಕಿಸ್ತಾನ ಪ್ರಜಾಪ್ರಭುತ್ವ ಚಳವಳಿ ಎಂಬ ಹೆಸರಿನ ಮೈತ್ರಿಯನ್ನು ಪ್ರಾರಂಭಿಸಲು ಒಪ್ಪಿಕೊಂಡಿವೆ ಎಂದು ಹೇಳಿದರು.
ಪಾಕಿಸ್ತಾನ ಸರ್ಕಾರವು ಸ್ಥಿರವಾಗಿದೆ ಎನ್ನುವ ವಿಚಾರ ಆಧಾರರಹಿತ. ಸರ್ಕಾರದ ಆಂತರಿಕ ವಿಚಾರದಲ್ಲಿ ಅಧಿಕ ಹಸ್ತಕ್ಷೇಪ ಮಾಡುತ್ತಿದೆ. ಇದು ರಾಷ್ಟ್ರದ ಸ್ಥಿರತೆ ಹಾಗೂ ಸಂಸ್ಥೆಗಳಿಗೆ ಅಪಾಯವಾದುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ ಪ್ರತಿಭಟನೆ ಹಂತ ಹಂತವಾಗಿ ಆರಂಭವಾಗಲಿದೆ. ಮೊದಲ ಹಂತದಲ್ಲಿ ಪ್ರತಿಪಕ್ಷಗಳು ಅಕ್ಟೋಬರ್ನಲ್ಲಿ ನಾಲ್ಕು ಪ್ರಾಂತ್ಯಗಳಲ್ಲಿ ಜಂಟಿ ರ್ಯಾಲಿಗಳನ್ನು ನಡೆಸಲಿವೆ.ಎರಡನೇ ಹಂತವು ಡಿಸೆಂಬರ್ನಲ್ಲಿ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ದೇಶಾದ್ಯಂತ ದೊಡ್ಡ ರ್ಯಾಲಿಗಳನ್ನು ನಡೆಸಲಿವೆ. ಅಂತಿಮವಾಗಿ, ಸರ್ಕಾರವನ್ನು ಉಚ್ಛಾಟಿಸಲು ಮುಂದಿನ ವರ್ಷ ಜನವರಿಯಲ್ಲಿ ಇಸ್ಲಾಮಾಬಾದ್ ಕಡೆಗೆ ದೀರ್ಘ ಮೆರವಣಿಗೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.