ವಾಷಿಂಗ್ಟನ್, ಅ.09 (DaijiworldNews/HR): ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಚರ್ಚೆ ಅ.15ರಂದು ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಟ್ರಂಪ್ ನಿರಾಕರಿಸಿದ್ದಾರೆ.
ಅ.15ರಂದು ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳ ಚರ್ಚಾ ಆಯೋಗವು ಮಿಯಾಮಿಯಲ್ಲಿ ಟೌನ್ ಹಾಲ್ ಚರ್ಚೆ ಆಯೋಜಿಸಿತ್ತು. ಇದರಲ್ಲಿ ಟ್ರಂಪ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರನ್ನು ಎದುರಾಗಬೇಕಿತ್ತು. ಆದರೆ, ಅಧ್ಯಕ್ಷ ಟ್ರಂಪ್ ಅವರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅದನ್ನು 'ವರ್ಚುವಲ್' ಆಗಿ ನಡೆಸಲು ಆಯೋಗ ತೀರ್ಮಾನಿಸಿದ್ದು, ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ಟ್ರಂಪ್ , ವರ್ಚುವಲ್ ಚರ್ಚೆಯಲ್ಲಿ ನನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ.ಕಂಪ್ಯೂಟರ್ ಹಿಂದೆ ಕುಳಿತು ಚರ್ಚೆ ಮಾಡುವುದು ಸರಿಯಲ್ಲ ಹಾಗಾಗಿ ನಾನು ಈ ಚರ್ಚೆಗೆ ಪಾಲ್ಗೊಳ್ಳುವುದಿಲ್ಲ ಎಂದರು.
ಟ್ರಂಪ್ ಅವರ ಪ್ರಚಾರ ಉಸ್ತುವಾರಿಗಳು, ವರ್ಚುವಲ್ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ ನಂತರ, ಟ್ರಂಪ್ ಅವರು ಜೋ ಬಿಡನ್ ಅವರೊಂದಿಗೆ ಎರಡು ಮುಖಾಮುಖಿ ಚರ್ಚೆ ಬಯಸಿದ್ದಾರೆ. ಅ. 22 ರಂದು ಒಂದು ಚರ್ಚೆ ಮತ್ತು ಚುನಾವಣೆಗೂ ಮೊದಲು ಕೊನೆಯ ಸಭೆ ನಡೆಯಬೇಕು. ಇದು ನೇರಾನೇರ ಚರ್ಚೆಯಾಗಿಬೇಕು ಎಂದು ಹೇಳಿದ್ದಾರೆ.
ಆದರೆ, ಟ್ರಂಪ್ ಅವರ ಪ್ರಸ್ತಾವವನ್ನು ಜೋ ಬಿಡನ್ ಅವರ ಪ್ರಚಾರ ತಂಡ ನಿರಾಕರಿಸಿದ್ದು, ಮನ ಬಂದಂತೆ ಚರ್ಚೆಯ ವೇಳಾಪಟ್ಟಿ ಬದಲಿಸುವುದಕ್ಕೆ ತಮ್ಮ ಸಹಮತವಿಲ್ಲ ಎಂದು ಹೇಳಿಕೊಂಡಿದೆ.