ಕಾಬೂಲ್,ಅ. 25 (DaijiworldNews/HR): ಆತ್ಮಾಹುತಿ ಉಗ್ರ ದಾಳಿಯಲ್ಲಿ 18 ಮಂದಿ ಸಾವನ್ನಪ್ಪಿ, 57 ಜನರು ಗಾಯಗೊಂಡ ಘಟನೆ ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದಿದೆ.
ಈ ಸ್ಪೋಟವು ಪಶ್ಚಿಮ ಕಾಬೂಲ್ನ ಡ್ಯಾಶ್-ಎ-ಬಾರ್ಚಿಯ ಶಿಯಾ ಶಿಕ್ಷಣ ಕೇಂದ್ರದ ಹೊರಗೆ ಸಂಭವಿಸಿದ್ದು, ದಾಳಿಕೋರನು ಶಿಕ್ಷಣ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಭದ್ರತಾ ಸಿಬ್ಬಂದಿ ತಡೆದರು ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಏರಿಯನ್ ಹೇಳಿದ್ದಾರೆ.
ಇನ್ನು ಯಾವುದೇ ಭಯೋತ್ಪಾದಕ ಗುಂಪು ಈ ಬಾಂಬ್ ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ ಮತ್ತು ದಾಳಿಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಉಗ್ರ ಸಂಘಟನೆ ತಾಲಿಬಾನ್ ಹೇಳಿಕೊಂಡಿದೆ. ದಾಳಿಯಲ್ಲಿ ಇದುವರೆಗೆ 18 ಮಂದಿ ಸಾವನ್ನಪ್ಪಿದ್ದು, 57 ಮಂದಿ ಗಾಯಗೊಂಡಿದ್ದು, ಅವರನ್ನು ರಾಜಧಾನಿಯ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.