ಇಸ್ಲಾಮಾಬಾದ್ , ಅ. 29 (DaijiworldNews/HR): ದಾಳಿಯ ವೇಳೆಯಲ್ಲಿ ಪಾಕಿಸ್ಥಾನ ಭೂ ಭಾಗ ಸೇರಿದ್ದ ಅಭಿನಂದನ್ ವರ್ಧಮಾನ್ ರನ್ನು ಪಾಕ್ 60 ಗಂಟೆಗಳ ಒಳಗೆ ಭಾರತಕ್ಕೆ ಮರಳಿ ಕಳುಹಿಸಿತ್ತು. ಆದರೆ ಅವರ ಬಿಡುಗಡೆಯ ಹಿಂದಿನ ಕಥೆ ಈಗ ಬಯಲಾಗುತ್ತಿದೆ.
ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ಥಾನ ಬಿಡುಗಡೆ ಮಾಡದಿದ್ದರೆ ಭಾರತವು ಅದರ ಮೇಲೆ ದಾಳಿ ನಡೆಸಬಹುದು ಎಂಬ ಭೀತಿಯಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು ಎಂದು ಪಿಎಂಎಲ್-ಎನ್ ನಾಯಕ ಅಯಾಝ್ ಸಾದಿಕ್ ಹೇಳಿದ್ದಾರೆ.
ಈ ಕುರಿತು ಪಾಕಿಸ್ತಾನ ಸಂಸತ್ತಿನಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡ ಪಿಎಂಎಲ್-ಎನ್ ನಾಯಕ ಅಯಾಝ್ ಸಾದಿಕ್, ವರ್ಧಮಾನ್ ಅವರನ್ನು ಕಸ್ಟಡಿಗೆ ಪಡೆದ ನಂತರ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ಶಾ ಮಹಮೂದ್ ಖುರೇಷಿ ಸಭೆಯಲ್ಲಿದ್ದು,ಇಮ್ರಾನ್ ಖಾನ್ ಹಾಜರಾಗಲು ನಿರಾಕರಿಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಕೋಣೆಗೆ ಬಂಸಿದ್ದರು, ಅವರ ಕಾಲುಗಳು ನಡುಗುತ್ತಿದ್ದವು, ಬೆವರುತ್ತಿದ್ದರು. ಆಗ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು, ನಾವು ಅಭಿನಂದನ್ ವರ್ಧಮಾನ್ ರನ್ನು ಬಿಡುಗಡೆ ಮಾಡದೆ ಇದ್ದರೆ ಪಾಕಿಸ್ತಾನದ ಮೇಲೆ ರಾತ್ರಿ 9 ಗಂಟೆಗೆ ಭಾರತವು ದಾಳಿ ನಡೆಸಲಿದೆ, ಅವರನ್ನು ಬಿಟ್ಟು ಬಿಡಿ ಎಂದಿದ್ದರು ಎಂಬುದಾಗಿ ಅಯಾಝ್ ಹೇಳಿದ್ದಾರೆ.