ಟರ್ಕಿ, ಅ.31 (DaijiworldNews/PY): ಟರ್ಕಿಯ ಕರಾವಳಿ ಹಾಗೂ ಗ್ರೀಕ್ ಸಮೋಸ್ ದ್ವೀಪದ ನಡುವೆ ಶುಕ್ರವಾರ ಸಂಭವಿಸಿದ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 26 ಏರಿದ್ದು, 800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಶನಿವಾರವೂ ಮುಂದುವರೆದಿದ್ದು, ಕಟ್ಟಡದ ಅವಶೇಷಗಳ ಕೆಳ ಸಿಲುಕಿಕೊಂಡವರನ್ನು ಹಾಗೂ ಬದುಕುಳಿದವರನ್ನು ರಕ್ಷಿಸುವಲ್ಲಿ ಪರಿಹಾರ ಕಾರ್ಯಪಡೆಯು ನಿರತವಾಗಿದೆ.
ಭೂಕಂಪನದ ಪರಿಣಾಮ ಟರ್ಕಿಯ ಅತಿದೊಡ್ಡ ನಗರವಾದ ಇಜ್ಮೀರ್ನಲ್ಲಿನ ಕಟ್ಟಡಗಳು ಧರೆಗುರುಳಿವೆ. ಇನ್ನು ಶನಿವಾರ ಮುಂಜಾನೆ ರಕ್ಷಣಾ ಕಾರ್ಯಾಚರಣೆಯ ವೇಳೆ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದ ಇನ್ಸಿ ಒಕಾನ್ ಎನ್ನುವವರನ್ನು ರಕ್ಷಿಸಲಾಗಿದೆ.
ಶುಕ್ರವಾರ ಸಂಭವಿಸಿದ ಭೂಕಂಪನದ ಪರಿಣಾಮ ಕುಸಿದಿರುವ ಮತ್ತೊಂದು ಎರಡು ಅಂತಸ್ತಿನ ಕಟ್ಟಡದಿಂದ 53 ಹಾಗೂ 35 ವರ್ಷದ ಇಬ್ಬರು ಮಹಿಳೆಯರನ್ನು ರಕ್ಷಣಾ ಪಡೆಯವರು ರಕ್ಷಿಸಿದ್ದಾರೆ.
ಇಜ್ಮೀರ್ನಲ್ಲಿ ಹಿರಿಯ ಮಹಿಳೆ ಸೇರಿದಂತೆ ಒಟ್ಟು 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಟರ್ಕಿಯ ವಿಪತ್ತು ಹಾಗೂ ತುರ್ತುಸ್ಥಿತಿ ನಿರ್ವಹಣಾ ಪ್ರೆಸಿಡೆನ್ಸಿ ತಿಳಿಸಿದೆ.