ಕಾಬೂಲ್, ಡಿ.20 (DaijiworldNews/MB) : ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ರವಿವಾರ ಉಗ್ರರು ಭೀಕರ ಕಾರ್ ಬಾಂಬ್ ದಾಳಿ ನಡೆಸಿದ್ದು, ಕನಿಷ್ಟ 8 ಮಂದಿ ಮೃತಪಟ್ಟು, 15ಕ್ಕೂ ಅಧಿಕ ಜನರಿಗೆ ಗಾಯವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಫ್ಘಾನ್ ಆಂತರಿಕ ಸಚಿವಾಲಯ, ಸಂಸದ ಖಾನ್ ಮೊಹಮ್ಮದ್ ವಾರ್ಡಕ್ರನ್ನು ಭದ್ರತೆಯೊಂದಿಗೆ ಕರೆದೊಯ್ಯುತ್ತಿದ್ದ ವೇಳೆ ಉಗ್ರರು ದೊಡ್ಡ ಕಾರಿನಲ್ಲಿ ಸ್ಫೋಟಕ ಇರಿಸಿ ಈ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಂಸದ ಖಾನ್ ಮೊಹಮ್ಮದ್ ವಾರ್ಡಕ್ ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ. ಅವರೆಲ್ಲರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ೮ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಸ್ಫೋಟದ ತೀವ್ರತೆಗೆ ಸುತ್ತಮುತ್ತಿಲಿನ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಮೀಪದ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ತಿಳಿಸಿದೆ.
ಇನ್ನು ತಾನೇ ಈ ದಾಳಿ ಮಾಡಿರುವುದಾಗಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದೆ.
ಶನಿವಾರ ಪೂರ್ವ ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದ ಗಿಲಾನ್ ಜಿಲ್ಲೆಯಲ್ಲಿ ನಡೆದ ಬೃಹತ್ ಸ್ಫೋಟದಲ್ಲಿ 15 ಮಕ್ಕಳು ಸಾವನ್ನಪ್ಪಿದ್ದು, 20 ಜನರು ಗಾಯಗೊಂಡಿದ್ದರು ಎಂದು ವರದಿಯಾಗಿದೆ. ಈ ಸ್ಫೋಟಕ್ಕೆ ಕಾರಣ ಇನ್ನೂ ಖಚಿತವಾಗಿಲ್ಲ.