ನ್ಯಾಶ್ವಿಲ್ಲೆ, ಡಿ.26 (DaijiworldNews/HR): ನಿಲ್ಲಿಸಲಾಗಿದ್ದ ವಾಹನವೊಂದು ಕ್ರಿಸ್ಮಸ್ ಹಬ್ಬದ ಮುಂಜಾನೆ ಸ್ಪೋಟಗೊಂಡ ಘಟನೆ ನ್ಯಾಶ್ವಿಲ್ಲೆಯ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
"ನ್ಯಾಶ್ವಿಲ್ಲೆಯಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಮೇರೆಗೆ ನಾವು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಇಲ್ಲಿ ನಿಲ್ಲಿಸಲಾಗಿದ್ದ ವಾಹನಯೊಂದರಲ್ಲಿ ಬಾಂಬ್ ಪತ್ತೆಯಾದ ಕಾರಣ ಹತ್ತಿರದ ಕಟ್ಟಡಗಳಲ್ಲಿದ್ದ ಜನರನ್ನು ಸ್ಥಳಾಂತರ ಮಾಡಿದ್ದೇವೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಬರುವಷ್ಟರಲ್ಲಿ ವಾಹನದಲ್ಲಿದ್ದ ಬಾಂಬ್ ಸ್ಪೋಟಗೊಂಡಿದೆ" ಎಂದು ಮೆಟ್ರೋ ನ್ಯಾಶ್ವೆಲ್ ಪೊಲೀಸ್ ಮುಖ್ಯಸ್ಥ ಜಾನ್ ಡ್ರೇಕ್ ತಿಳಿಸಿದ್ದಾರೆ.
ಇನ್ನು "ಈ ದಾಳಿಯಲ್ಲಿ ಮೂವರು ಗಾಯಗೋಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ. ಈ ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.