ಜಪಾನ್, ಮಾ.18 (DaijiworldNews/PY): ನಿಗದಿತ ಸಮಯಕ್ಕಿಂತ ಎರಡು ನಿಮಿಷ ಬೇಗನೇ ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಜಪಾನ್ ಸರಕಾರಿ ಕಚೇರಿಯ ಉದ್ಯೋಗಿಗಳಿಗೆ ಜಪಾನ್ ತಕ್ಕ ಶಾಸ್ತಿ ಮಾಡಿದೆ.
ಸಾಂದರ್ಭಿಕ ಚಿತ್ರ
ಎರಡು ನಿಮಿಷಗಳ ಮುಂಚಿತವಾಗಿ ಕಚೇರಿಯಿಂದ ಮನೆಗೆ ತೆರಳಿದ್ದ ಸಿಬ್ಬಂದಿಗಳಿಗೆ ಶಿಕ್ಷೆ ನೀಡಿದ್ದು, ಅವರ ವೇತನ ಕಡಿತಗೊಳಿಸಲು ಜಪಾನ್ ಸರ್ಕಾರ ಆದೇಶಿಸಿದೆ. ಅಲ್ಲದೇ, ನಿಗದಿತ ಸಮಯಕ್ಕಿಂತ ಮುನ್ನ ಕಚೇರಿ ಖಾಲಿ ಮಾಡದಂತೆ ಎಚ್ಚರಿಕೆ ನೀಡಿದೆ.
ಜಪಾನ್ನ ಫುನಾಬಾಶಿ ಸಿಟಿ ಬೋರ್ಡ್ ಆಫ್ ಎಜುಕೇಶನ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಹಾಗೂ ನೌಕರರು ಪ್ರತಿದಿನ ನಿಗದಿತ ಸಮಯಕ್ಕಿಂತ ಎರಡು ನಿಮಿಷ ಬೇಗ ಹೊರಡುತ್ತಿದ್ದರು. ನೌಕರರು ಸಾಯಂಕಾಲ 5.15ಕ್ಕೆ ಕಚೇರಿಯಿಂದ ತೆರಳಬೇಕಿತ್ತು. ಆದರೆ, ಅವರು 5.13ಕ್ಕೆ ಕಚೇರಿಯಿಂದ ತೆರಳುತ್ತಿದ್ದರು. 59 ವರ್ಷದ ನೌಕರ ಕಚೇರಿಯಿಂದ ಬೇಗ ತೆರಳಲು ನೆರವಾಗಿದ್ದ.
ಇದನ್ನು ಗಮನಿಸಿದ ಸರ್ಕಾರ ನೌಕರರಿಗೆ ತಕ್ಕ ಶಾಸ್ತಿ ಮಾಡಿದೆ. ಕಚೇರಿಯ ಮಹಿಳಾ ಅಧಿಕಾರಿಯೋರ್ವಳ ಸಂಬಳದಲ್ಲಿ ಕಳೆದ ಮೂರು ತಿಂಗಳಿನಿಂದ ಶೇ.10ರಷ್ಟು ಕಡಿತ ಮಾಡಿದೆ. ಅಲ್ಲದೇ ಇಬ್ಬರು ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಎಚ್ಚರಿಕೆ ನೀಡಿದ್ದು, ನಾಲ್ವರು ನೌಕರರಿಗೆ ನೋಟಿಸ್ ನೀಡಲಾಗಿದೆ.
2014ರಲ್ಲಿ 64 ವರ್ಷದ ಉದ್ಯೋಗಿಯೋರ್ವರು ಮೂರು ನಿಮಿಷಗಳ ಮೊದಲೇ ಊಟ ಮಾಡಿದ್ದಕ್ಕಾಗಿ ಶಿಕ್ಷೆ ನೀಡಲಾಗಿತ್ತು.