ನವದೆಹಲಿ, ಫೆ 01(SM): ಭೂಗಾಪಾತಕಿ, ಮೋಸ್ಟ್ ವಾಂಟೆಡ್ ರವಿಪೂಜಾರಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದೂವರೆ ದಶಕದಿಂದಲೂ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದ ಸೆನಗಲ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯವನಾದ ರವಿ ಪೂಜಾರಿ ವಿರುದ್ಧ ಮಹಾರಾಷ್ಟ್ರ ಮತ್ತು ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ 40ಕ್ಕೂ ಅಧಿಕ ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಆತನ ಬಂಧನಕ್ಕೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು.
ರವಿ ಪೂಜಾರಿಯನ್ನು ಸೆನಗಲ್ ಪೊಲೀಸರು ಬಂಧಿಸಿದ್ದು ಆತನನ್ನು ದೇಶಕ್ಕೆ ಕರೆತರಲು ಕೇಂದ್ರ ಸರಕಾರ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದೆ. ಜತೆಗೆ ಸೆನಗಲ್ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದು, ಕೇಂದ್ರ ತನಿಖಾ ಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮುಂಬಯಿ ಮತ್ತು ರಾಜ್ಯದ ವಿವಿಧೆಡೆ ಹಲವಾರು ಪ್ರಕರಣಗಳು ರವಿ ಪೂಜಾರಿ ವಿರುದ್ಧ ದಾಖಲಾಗಿವೆ. ರಾಜ್ಯದ ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕಾರಣಿಗಳಿಗೆ ವಿದೇಶಗಳಿಂದ ಕರೆ ಮಾಡಿ ಜೀವ ಬೆದರಿಕೆ ಹಾಗೂ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೂಡ ರವಿ ವಿರುದ್ಧ ದಾಖಲಾಗಿವೆ.