ಬಾಗ್ದಾದ್, ಫೆ 18 (MSP): ಇಲ್ಲಿನ ದಿಯಾಲಿ ಪ್ರಾಂತ್ಯದ ಆಸ್ಪತ್ರೆಯೊಂದರಲ್ಲಿ 25 ವರ್ಷದ ಇರಾಕ್ ಮಹಿಳೆಯೊಬ್ಬರು ಏಳು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದರಲ್ಲಿ ಆರು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿದ್ದು, ತಾಯಿ ಹಾಗೂ ಮಕ್ಕಳು ಎಲ್ಲರೂ ಆರೋಗ್ಯವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ. ಇರಾಕ್ ನಲ್ಲಿ ಏಳು ಮಕ್ಕಳಿಗೆ ಜನ್ಮ ನೀಡಿದ ಮೊದಲ ಪ್ರಕರಣ ಇದಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮೂಲಕ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಜಗತ್ತಿನಾದ್ಯಂತ ವೈರಲ್ ಆಗಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ವಕ್ತಾರ ಫಿರಾಸ್ ಅಲಿ ಲಿಝ್ವಿ, 25 ವರ್ಷದ ಮಹಿಳೆಗೆ ಸಹಜ ಹೆರಿಗೆಯಾಗಿದ್ದು, 7 ಮಕ್ಕಳಿಗೆ ಏಕಕಾಲದಲ್ಲಿ ತಾಯಿಯಾಗಿದ್ದಾರೆ. ತಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಈ ಮಹಿಳೆಯ ಪತಿ ಯೂಸದ್ ಫಾದ್ ಪ್ರಕಾರ , ಈ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದು ಇದು ನಮ್ಮ ಕೊನೆಯ ಎಂದು ನಿರ್ಧರಿಸಿದ್ದೇವು. ಆದರೆ ಈಗ ಏಳು ಮಕ್ಕಳು ಜನಿಸಿದ್ದು, ಒಟ್ಟು ೧೦ ಮಕ್ಕಳ ಪೋಷಣೆ ಅವರ ಹೆಗಲ ಮೇಲೆ ಬಿದ್ದಿದೆ. ಆದರೂ ಇದೀಗ ಒಮ್ಮೆಲೆ ಏಳು ಮಕ್ಕಳ ತಂದೆಯಾಗಿದ್ದಕ್ಕೆ ಖುಷಿಯಾಗಿದೆ ಎಂದು ಪಾದಲ್ ಸಂತಸ ವ್ಯಕ್ತಪಡಿಸುತ್ತಾರೆ.