ಇಸ್ಲಾಮಾಬಾದ್, ಫೆ 19 (MSP): ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ರೆ ನಾವು ಅದೇ ಮಾದರಿಯ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪುಲ್ವಾಮ ದಾಳಿ ಬಗ್ಗೆ ಪಾಕಿಸ್ತಾನ ರೇಡಿಯೋದಲ್ಲಿ ಮಾತನಾಡಿದ ಇಮ್ರಾನ್ ಖಾನ್, ದಾಳಿಗೆ ಕಾರಣ ನಾವು ಎಂದು ಭಾರತ ಸುಖಾಸುಮ್ಮನೆ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ. ಪುಲ್ವಾಮ ಉಗ್ರ ದಾಳಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ
ಭಾರತಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಹೋದರೂ ಕೂಡಾ ಪಾಕಿಸ್ತಾನದ ಮೇಲೆ ಗೂಬೆ ಕೂರಿಸುವುದು ಭಾರತ ಸರ್ಕಾರಕ್ಕೆ ಅಭ್ಯಾಸವಾಗಿದೆ. ಹಿಂಸಾಚಾರ ಹರಡುವುದು ನಮ್ಮ ನೆಲದ ಗುಣವಲ್ಲ. ಒಂದು ವೇಳೆ ಪುಲ್ವಾಮ ಉಗ್ರ ದಾಳಿಯಲ್ಲಿ ಪಾಕ್ ಮೂಲದವರ ಕೈವಾಡವಿದ್ದರೆ ನಾವು ಅಂತಹ ವ್ಯಕ್ತಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಭಾರತದ ಮೇಲೆ ದಾಳಿ ಮಾಡಿದೆ ಪಾಕಿಸ್ತಾನಕ್ಕೆ ಏನೂ ಲಾಭ ಎಂದು ಭಾರತ ಯೋಚನೆ ಮಾಡಬೇಕು ಎಂದು ಹೇಳಿದರು.
ಇಷ್ಟಾದರೂ ಭಾರತ ಒಂದು ವೇಳೆ ನಮ್ಮ ಮೇಲೆ ದಾಳಿ ಮಾಡಿದ್ರೆ ಅದಕ್ಕೆ ತಕ್ಕ ಉತ್ತರ ನಾವು ನೀಡುತ್ತೇವೆ. ನಮ್ಮ ದೇಶದ ಭದ್ರತೆಗೆ ತೊಂದರೆಯಾದರೆ, ಭಾರತ ನಮ್ಮ ಮೇಲೆ ದಾಳಿ ಮಾಡಿದರೆ, ನಮ್ಮ ಆತ್ಮರಕ್ಷಣೆಗಾಗಿ ನಾವೂ ಕೂಡ ಪ್ರತಿದಾಳಿ ಮಾಡುತ್ತೇವೆ ಎಂಬುದನ್ನು ಭಾರತ ಸರ್ಕಾರ ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.