ಢಾಕಾ,ಫೆ 21(MSP):ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿನ ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ಅಗ್ನಿ ದುರಂತವೊಂದು ಸಂಭವಿಸಿದ್ದು, ಕನಿಷ್ಠ 69ಮಂದಿ ಸಾವಿಗೀಡಾಗಿದ್ದಾರೆ. ಹಳೆ ಢಾಕಾದ ಸಂಕೀರ್ಣವೊಂದರಲ್ಲಿ ಈ ದುರಂತ ಸಂಭವಿಸಿದ್ದು, ಇಲ್ಲಿ ರಾಸಾಯನಿಕ ಸಾಮಾಗ್ರಿ ಸಂಗ್ರಹಿಸಲಾಗಿತ್ತು ಎಂದು ತಿಳಿದುಬಂದಿದೆ.
ಸಾವಿನ ಸಂಖ್ಯೆ ಏರಿಕೆಯಾಗಬಹುದು ಎಂದು ಬಾಂಗ್ಲಾ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅಲಿ ಅಹ್ಮದ್ ಮಾಹಿತಿ ನೀಡಿದ್ದಾರೆ. ಬುಧವಾರ ರಾತ್ರಿ ಸುಮಾರು 10:40ರ ವೇಳೆಗೆ ಬೆಂಕಿ ತಗುಲಿದ್ದು, ರಾತ್ರಿ ಕಳೆದು ಹಗಲಾದರೂ ಬೆಂಕಿ ಉರಿಯುತ್ತಲೇ ಇದೆ. ಬೆಂಕಿ ಆರಿಸಲು 200ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳನ್ನು ಬಳಸಲಾಗಿದೆ.
ಒಂದಕ್ಕೊಂದು ಅಂಟಿದಂತಿರುವ ಕಟ್ಟಡಗಳು ಹಾಗೂ ಮಹಡಿಯಿಂದ ಇಳಿಯಲು ಕಿರಿದಾದ ಮೆಟ್ಟಿಲುಗಳಿಂದಾಗಿ ಜನರು ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಸಿಲುಕಿದ್ದಾರೆ. ಅಲ್ಲದೆ ಈ ವಸತಿ ಬಡಾವಣೆಯ ಅತ್ಯಂತ ಕಡಿದಾದ ರಸ್ತೆಗಳ ಮೂಲಕ ಅಗ್ನಿಶಾಮಕ ಸೇವೆ ಸರಿಯಾದ ಸಂದರ್ಭದಲ್ಲಿ ಅಲ್ಲಿಗೆ ತಲುಪಲಾಗದೆ ದುರಂತದ ತೀವ್ರತೆ ಹೆಚ್ಚಲು ಕಾರಣ ಎನ್ನಲಾಗಿದೆ.
ಬೆಂಕಿಯ ತೀವ್ರತೆಗೆ ಅಕ್ಕ ಪಕ್ಕದಲ್ಲಿ ಹೋಗುತ್ತಿದ್ದ ದಾರಿ ಹೋಕರು, ಹಾಗೂ ಸನಿಹದಲ್ಲೆ ಇದ್ದ ಮದುವೆ ದಿಬ್ಬಣ ತಂಗಿದ್ದ ಸಮುದಾಯಭವನಕ್ಕೂ ಬೆಂಕಿ ವ್ಯಾಪಿಸಿ ಹಲವಾರು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.