ನವದೆಹಲಿ, ಫೆ 27 (MSP):ಪಾಕಿಸ್ತಾನವನ್ನು ಸದಾ ಪೊರೆಯುವ ರಾಷ್ಟ್ರ ಎಂದೇ ಗುರುತಿಸಿಕೊಂಡಿರುವ ಚೀನಾ, ಈಗ ತನ್ನ ಪರಮಾಪ್ತ ಸ್ನೇಹಿತ ಪಾಕ್ ಗೆ ಕೈ ಕೊಟ್ಟಿದೆ. ಭಾರತ ಪಾಕ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದರ ಬಗ್ಗೆ ಪಾಕಿಸ್ತಾನವನ್ನು ಬೆಂಬಲಿಸದೇ ತಟಸ್ಥವಾಗಿ ನಡೆ ತೋರಿದ್ದ ಚೀನಾ, ಈಗ ಮತ್ತೊಂದು ಶಾಕ್ ನೀಡಿದೆ. ಭಯೋತ್ಪಾದನೆಗೆ ಯಾವುದೇ ಕಾರಣಕ್ಕೂ ಪೋಷಿಸಬೇಡಿ ಪಾಕಿಸ್ತಾನಕ್ಕೆ ಚೀನಾ ಮತ್ತು ರಷ್ಯಾ ಜಂಟಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.
ಭಾರತೀಯ ವಾಯುಪಡೆ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದ ನಂತರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚೀನಾಕ್ಕೆ ಭೇಟಿ ನೀಡಿ, ಭಯೋತ್ಪಾದನೆಗೆ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದರು.
ಪಾಕಿಸ್ತಾನದ ವಿರುದ್ಧ ಚೀನಾ ಮತ್ತು ರಷ್ಯಾದ ಜಂಟಿ ಹೇಳಿಕೆಯಿಂದ ಪಾಕಿಸ್ತಾನ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಇತ್ತ ಕಡೆ ಚೀನಾ, ರಷ್ಯಾ ಹೇಳಿಕೆಯಿಂದ ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ.ಇದರೊಂದಿಗೆ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರವಾದ ಹಿನ್ನಡೆಯುಂಟಾಗಿದ್ದು, ಅತ್ತ ಕಡೆ ಚೀನಾ ಕೂಡಾ ಕೈ ಕೊಟ್ಟಿದ್ದರಿಂದ ಪಾಕಿಸ್ತಾನ ಅಕ್ಷರಶಃ ಏಕಾಂಗಿಯಾಗಿದೆ.