ನವದೆಹಲಿ, ಮಾ 03 (MSP): ಭಾರತೀಯ ಕಮಾಂಡರ್ ಅಭಿನಂದನ್ ರನ್ನು ಹಸ್ತಾಂತರ ಮಾಡಿದ ಹಿನ್ನಲೆಯಲ್ಲಿ ಸೌಹಾರ್ದ ನಡೆ ಪ್ರದರ್ಶಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂದು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಸೆಕ್ರೆಟೇರಿಯೆಟ್ ನಲ್ಲಿ ಸಚಿವ ಫವಾದ್ ಚೌಧರಿ ನಿಲುವಳಿ ಮಂಡಿಸಿದ್ದಾರೆ. ಭಾರತದ ಯುದ್ಧ ಉನ್ಮಾದ ಮತ್ತು ಆಕ್ರಮಣಶೀಲತೆಯ ವರ್ತನೆಯಿಂದಾಗಿ ಎರಡು ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಯುದ್ದಕ್ಕೆ ತಯಾರಾಗಿದ್ದವು. ಆದರೆ ಇಮ್ರಾನ್ ಖಾನ್ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಚೌಧರಿ ಈ ವೇಳೆ ಹೇಳಿದ್ದಾರೆ.
ಜತೆಗೆ ಟ್ವಿಟ್ಟರ್ ನಲ್ಲಿ ಪಾಕಿಸ್ತಾನಿಯರು 2 ಲಕ್ಷ ಸಹಿ ಸಂಗ್ರಹ ಅಭಿಯಾನ ಆರಂಭಿಸಿ 2020 ನೇ ಸಾಲಿನಲ್ಲಿ ಇಮ್ರಾನ್ ಖಾನ್ ಗೆ ನೊಬೆಲ್ ನೀಡಲು, ಒತ್ತಾಯಿಸುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ವ್ಯಂಗ್ಯ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
2020ನೇ ಸಾಲಿನಲ್ಲಿ ಇಮ್ರಾನ್ ಖಾನ್ ಗೆ ಶಾಂತಿ ಪ್ರಶಸ್ತಿ ನೀಡಬೇಕೆಂದು ನಾರ್ವೆಯ ನೊಬೆಲ್ ಸಮಿತಿ ನಾಮನಿರ್ದೇಶನ ಸಮಿತಿಗೂ ಆನ್ ಲೈನ್ ಅರ್ಜಿ ಸಲ್ಲಿಕೆಯಾಗಿದೆ.