ಸಿಡ್ನಿ,ಮಾ 06(MSP): ಆಸ್ಟ್ರೇಲಿಯಾದ ಸಿಡ್ನಿಯ ಜನನಿಬಿಡ ಪ್ರದೇಶದಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ದಂತ ವೈದ್ಯೆ ಪ್ರೀತಿ ರೆಡ್ಡಿ(32) ಅವರ ಮೃತದೇಹ ಪತ್ತೆಯಾಗಿದೆ. ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಸೂಟ್ ಕೇಸೊಂದರಲ್ಲಿ ತುಂಬಿ ಅವರದ್ದೇ ಕಾರ್ ನಲ್ಲಿ ಇರಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಪ್ರೀತಿ ರೆಡ್ಡಿ ಅವರ ದೇಹದ ತುಂಬಾ ಇರಿತದ ಗಾಯಗಳಿದ್ದು, ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಭಾನುವಾರ ಬೆಳಿಗ್ಗೆ 11 ಗಂಟೆಯ ತನ್ನ ಕುಟುಂಬಸ್ಥರೊಂದಿಗೆ ಫೋನ್ ಮೂಲಕ ಮಾತನಾಡಿದ್ದ ಪ್ರೀತಿ, ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇನ್ನೊಂದೆಡೆ ಭಾನುವಾರ ಸಿಡ್ನಿಯ ಜಾರ್ಜ್ ಸ್ಟ್ರೀಟ್ನಲ್ಲಿರುವ ಮ್ಯಾಕ್ಡೊನಾಲ್ಡ್ನ ಸಿಸಿ ಕ್ಯಾಮೆರದಲ್ಲಿ ದಂತ ವೈದ್ಯೆಯ ಅವರ ಚಲನವಲನ ದಾಖಲಾಗಿದೆ. ಶನಿವಾರದಂದು ಇವರು ತನ್ನ ಮಾಜಿ ಪ್ರಿಯಕರನೊಂದಿಗೆ ಸಿಡ್ನಿಯ ಮಾರ್ಕೆಟ್ ಸ್ಟ್ರೀಟ್ ನಲ್ಲಿದ್ದ ಹೊಟೇಲ್ ವೊಂದರಲ್ಲಿ ತಂಗಿದ್ದರು ಎಂದು ವರದಿ ತಿಳಿಸಿದೆ.
ವಾರಾಂತ್ಯದ ದಂತ ಚಿಕಿತ್ಸೆ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರೀತಿ ತನ್ನ ಸಹೋದ್ಯೋಗಿಯೊಂದಿಗೆ, ಆಕೆಯನ್ನು ಸೋಮವಾರ ಭೇಟಿಯಾಗುವುದಾಗಿ ತಿಳಿಸಿದ್ದರು.
ಆದರೆ ಭಾನುವಾರ ಇವರು ಧಿಡೀರ್ ಆಗಿ ನಾಪತ್ತೆಯಾಗಿದ್ದರು. ಇನ್ನೊಂದೆಡೆ ಪ್ರೀತಿಯ ಮಾಜಿ ಪ್ರಿಯಕರಸಹ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇದೂ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.ಅಪಘಾತ ಉದ್ದೇಶ ಪೂರ್ವಕವೇ ಎಂಬ ಸಂಶಯಗಳು ಹುಟ್ಟಿಕೊಂಡಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು ಕೊಲೆಯ ಹಿಂದಿನ ರಹಸ್ಯವನ್ನು ಶೀಘ್ರದಲ್ಲೇ ಪತ್ತೆ ಹಚ್ಚುವುದಾಗಿ ಸಿಡ್ನಿ ಪೊಲೀಸರು ತಿಳಿಸಿದ್ದಾರೆ.