ವಾಷಿಂಗ್ಟನ್,ಮಾ 12 (MSP): 2014-18ರ ಅವಧಿಯಲ್ಲಿ ಭಾರತವು ವಿಶ್ವದ ಎರಡನೇ ಅತೀ ದೊಡ್ಡ ಪ್ರಮುಖ 'ಶಸ್ತ್ರಾಸ್ತ್ರ ಆಮದು ದೇಶ'ವಾಗಿದ್ದು ಇದು ವಿಶ್ವದಲ್ಲಿ ಶೇ.9.5ರ ಪಾಲು ಹೊಂದಿದೆ ಎಂದು ವರದಿಯೊಂದು ತಿಳಿಸಿದೆ. ಆದರೆ 2009- 13ರ ಸಮಯಕ್ಕೆ ಹೋಲಿಸಿದರೆ 2014-18ರ ಅವಧಿಯಲ್ಲಿ ಭಾರತದ ಅಮದು ಪ್ರಮಾಣ ತೀರಾ ಕುಸಿದಿದ್ದು ಹೀಗಿದ್ದರೂ ಭಾರತ ಎರಡನೇ ಸ್ಥಾನದಲ್ಲಿದೆ.
ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್(ಎಸ್ಐಪಿಆರ್ಐ) ಪ್ರಕಟಿಸಿದ ವರದಿಯಲ್ಲಿ 2009–13 ಮತ್ತು 2014–18ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ 24ರಷ್ಟು ಇಳಿಕೆಯಾಗಿದೆ. ಆದರೂ ಭಾರತ ಜಾಗತಿಕವಾಗಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.
ಈ ಹಿಂದೆ ರಷ್ಯಾದಿಂದ ಭಾರತ ಶಸ್ತ್ರಾಸ್ತ್ರಗಳನ್ನು ಅಮದು ಮಾಡಿಕೊಳ್ಳುತ್ತಿತ್ತು. ಆದರೆ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಮೇಲೆ ಭಾರತವು ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಯತ್ನದ ಫಲವಾಗಿ 2009-2013 ಮತ್ತು 2014-2018ರಲ್ಲಿನ ರಷ್ಯಾದಿಂದ ಮಾಡಿಕೊಳ್ಳುತ್ತಿದ್ದ ಶಸ್ತ್ರಾಸ್ತ್ರ ಆಮದು ತೀರಾ ಕುಂಠಿತವಾಗಿದೆ ಎಂದು ವರದಿ ತಿಳಿಸಿದೆ. 2014–18ರಲ್ಲಿ ಫ್ರಾನ್ಸ್, ಇಸ್ರೇಲ್, ಅಮೆರಿಕ ದೇಶಗಳು ಭಾರತಕ್ಕೆ ಶಸ್ತ್ರಾಸ್ತ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಿದೆ. ಒಟ್ಟಾರೆ ಜಾಗತಿಕವಾಗಿ ಸೌದಿ ಅರೇಬಿಯಾ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶವಾಗಿದೆ. ಇನ್ನು ಶಸ್ತ್ರಾಸ್ತ್ರ ರಫ್ತುದಾರ ದೇಶದಲ್ಲಿ ಚೀನಾ ಪ್ರಮುಖ ರಾಷ್ಟವಾಗಿ ಹೊರಹೊಮ್ಮಿದೆ. ಚೀನಾ ದೇಶದ ಪ್ರಮುಖ ಗ್ರಾಹಕ ದೇಶವಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮುಂಚೂಣಿಯಲ್ಲಿದೆ.