ನವದೆಹಲಿ,ಮಾ 13(MSP): ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ಮಾ.12 ರ ಮಂಗಳವಾರದಿಂದ ಭಾರತವೂ ಸ್ಥಗಿತಗೊಳಿಸಿದೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಮಾನಯಾನ ಸಚಿವಾಲಯ , ತತ್’ಕ್ಷಣದಿಂದಲೇ ಬೋಯಿಂಗ್ 737-ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನಿರ್ಧರಿಸಿದೆ. ಸಂಪೂರ್ಣ ಸುರಕ್ಷತಾ ಪರೀಕ್ಷೆಗಳನ್ನು ನಡೆಸಿ ಅಗತ್ಯ ಮಾರ್ಪಾಡುಗಳನ್ನು ಮಾಡುವ ವರೆಗೂ ಈ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ. ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದು ಹೇಳಿಕೊಂಡಿದೆ.
ಇಥಿಯೋಪಿಯಾದಲ್ಲಿ ಬೋಯಿಂಗ್ 737 ಮ್ಯಾಕ್ಸ್–8 ವಿಮಾನ ಪತನಗೊಂಡು ಪ್ರಯಾಣಿಸುತ್ತಿದ್ದ ಎಲ್ಲ 157 ಮಂದಿ ಸಾವಿಗೀಡಾದ ದುರ್ಘಟನೆಯ ನಡೆದ ಬಳಿಕ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು 737 ಮ್ಯಾಕ್ಸ್ ವಿಮಾನಗಳ ಹಾರಾಟಕ್ಕೆ ತಾತ್ಕಲಿಕವಾಗಿ ಭ್ರೇಕ್ ಹಾಕಿದೆ. ಭಾರತ, ಚೀನಾ, ಮಲೇಷಿಯಾ, ಸಿಂಗಾಪುರ್, ಆಸ್ಟ್ರೇಲಿಯಾ, ಬ್ರಿಟನ್ ಹಾಗೂ ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು 737 ಮ್ಯಾಕ್ಸ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುತ್ತಿದ್ದಂತೆ ನ್ಯೂಯಾರ್ಕ್ ಷೇರು ಮಾರುಕಟ್ಟೆಯಲ್ಲಿ ಬೋಯಿಂಗ್ ಸಂಸ್ಥೆಯ ಷೇರು ಬೆಲೆ ಗಣನೀಯವಾಗಿ ಕುಸಿತ ಕಂಡಿದೆ.
ಆದರೆ ಆರೋಪಗಳನ್ನು ತಳ್ಳಿ ಹಾಕಿರುವ ಬೋಯಿಂಗ್ ಸಂಸ್ಥೆ ತನ್ನ ಮ್ಯಾಕ್ಸ್ ಮಾದರಿ ವಿಮಾನಗಳಲ್ಲಿ ಸುರಕ್ಷತೆಯ ಕುರಿತು ಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ. ಅತಿ ವೇಗವಾಗಿ ಮಾರಾಟವಾಗುತ್ತಿರುವ ಬೋಯಿಂಗ್ ವಿಮಾನಗಳಿಗೆ ಈಗಾಗಲೇ ಜಗತ್ತಿನಾದ್ಯಂತ ಹೆಚ್ಚು ಬೇಡಿಕೆ ಉಂಟಾಗಿತ್ತು. ಬೋಯಿಂಗ್ ಸಂಸ್ಥೆಗೆ 5000 ವಿಮಾನಗಳ ಪೂರೈಕೆಯ ಬೇಡಿಕೆ ಇದೆ.