ನೂಜಿಲ್ಯಾಂಡ್,ಮಾ.17(AZM): ನ್ಯೂಜಿಲೆಂಡ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅದರಲ್ಲಿ ಐವರು ಭಾರತೀಯರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ಭಾರತೀಯರನ್ನು ಮಹಬೂಬ್ ಖೋಖರ್, ರಮೀಝ್ ವೋರಾ, ಆಸಿಫ್ ವೋರಾ, ಅನ್ಸಿ ಅಲಿಬವ ಮತ್ತು ಒಝೈರ್ ಕಾದಿರ್ ಎಂದು ಗುರುತಿಸಲಾಗಿದೆ.
ನ್ಯೂಜಿಲ್ಯಾಂಡ್ ನ 2 ಮಸೀದಿಗಳ ಮೇಲೆ ಉಗ್ರರು ದಾಳಿ ನಡೆಸಿದ್ದು ಸಾವಿನ ಸಂಖ್ಯೆ 50 ದಾಟಿದೆ. ಹಾಗೂ ಬಹಳಷ್ಟು ಮಂದಿ ಕಾಣೆಯಾಗಿದ್ದು, ಇವರ ಪೈಕಿ 9ಕ್ಕೂ ಹೆಚ್ಚು ಮಂದಿ ಭಾರತೀಯರು ಎಂದು ತಿಳಿದುಬಂದಿದೆ. ಈ ಕುರಿತು ನ್ಯೂಜಿಲೆಂಡ್ನ ಭಾರತೀಯ ರಾಯಭಾರಿಯಾಗಿರುವ ಸಂಜೀವ್ ಕೊಹ್ಲಿ ಅವರು ಖಚಿತ ಮಾಹಿತಿ ನೀಡಿದ್ದಾರೆ.
ದಾಳಿಯಲ್ಲಿ ತೊಂದರೆಗೊಳಗಾದ ಭಾರತೀಯರ ಕುರಿತು ಮಾಹಿತಿ ನೀಡಲು ಸಹಾಯವಾಣಿಯನ್ನು ಆರಂಭಿಸಲಾಗಿದೆ. ದಿನ 24 ಗಂಟೆಯೂ 021803899 ಮತ್ತು 021850033 ನಂಬರ್ನ ಸಹಾಯವಾಣಿ ಕಾರ್ಯ ನಿರ್ವಹಣೆ ಮಾಡಲಿದೆ.
ನ್ಯೂಝಿಲ್ಯಾಂಡ್ ನ ಅಲ್ ನೂರ್ ಮಸೀದಿ ಹಾಗೂ ಹೊರವಲಯದಲ್ಲಿರುವ ಲಿನ್ವುಡ್ ಮಸೀದಿಯ ಮೇಲೆ ಮಾ.15ರಂದು ಬೆಳಗ್ಗೆ ಉಗ್ರರು ಗನ್ ದಾಳಿ ನಡೆಸಿದ್ದರು. ಹೆಲ್ಮೆಟ್ಗೆ ಕ್ಯಾಮೆರಾ ಫಿಕ್ಸ್ ಮಾಡಿಕೊಂಡಿದ್ದ ಉಗ್ರರು ಫೇಸ್ಬುಕ್ನಲ್ಲಿ ದಾಳಿಯ ನೇರ ಪ್ರಸಾರ ಕೂಡ ಮಾಡಿದ್ದರು. ಪೊಲೀಸರು ಓರ್ವ ಮಹಿಳೆ ಸೇರಿದಂತೆ ನಾಲ್ವರು ಶಂಕಿತ ದಾಳಿಕೋರರನ್ನು ಬಂಧಿಸಿದ್ದರು.