ಲಂಡನ್ , ಮಾ 21(MSP): ಸ್ಕಾಟ್ ಲ್ಯಾಂಡ್ ಯಾರ್ಡ್ ನಲ್ಲಿ ಬಂಧಿತನಾಗಿರುವ ದೇಶಭ್ರಷ್ಟ ವಜ್ರೋದ್ಯಮಿ ನೀರವ್ ಮೋದಿ ಮೂರು ಪಾಸ್ ಪೋರ್ಟ್ ಗಳನ್ನು ಹೊಂದಿರುವುದು ಬಯಲಾಗಿದೆ. ಪಾಸ್ ಪೋರ್ಟ್ ಗಳ ಜತೆ ಹಲವು ನಿವಾಸಿ ಕಾರ್ಡ್ ಗಳೂ ಸಿಕ್ಕಿವೆ. ಅವುಗಳಲ್ಲಿ ಕೆಲವು ಅವಧಿ ಮುಗಿದಿದೆ. ಯುಎಇ, ಸಿಂಗಪುರ ಮತ್ತು ಹಾಂಕಾಂಗ್ ನಲ್ಲಿ ವಾಸಿಸಲು ಅನುಮತಿ ಪಡೆದಿದ್ದ ಕಾರ್ಡ್ ಗಳು ಇದಾಗಿದೆ. ಬುಧವಾರ ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ನೀರವ್ ಮೋದಿಯನ್ನು ಹಾಜರುಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
48 ವರ್ಷದ ನೀರವ್ ಮೋದಿ ಪರ ವಕೀಲರ ತಂಡ, ಜಾಮೀನಿಗೆ ಮನವಿ ಸಲ್ಲಿಸುವ ವೇಳೆ ಈ ದಾಖಲೆಗಳನ್ನು ಒದಗಿಸಿದ್ದಾರೆ. ಹಲವು ಪ್ರಯಾಣ ದಾಖಲೆಗಳನ್ನು ಪಡೆಯಲೆಂದು ಈ ಪಾಸ್ ಪೋರ್ಟ್ ಗಳನ್ನು ತಾವು ಹೊಂದಿರುವುದಾಗಿ ನೀರವ್ ಕೋರ್ಟ್ ಗೆ ಹೇಳಿಕೆ ನೀಡಿದ್ದಾರೆ. ಆದರೆ ಅದನ್ನು ಜಿಲ್ಲಾ ನ್ಯಾಯಾಧೀಶ ಮೇರಿ ಮಾಲ್ಲನ್ ತಿರಸ್ಕರಿಸಿದ್ದಾರೆ. ಹಲವು ಶತಕೋಟಿ ಹಣ ವಂಚನೆ ಮತ್ತು ಕಳ್ಳಸಾಗಣೆ ಕೇಸಿನಲ್ಲಿ ಆರೋಪಿಯಾಗಿರುವ ನೀರವ್ ಮೋದಿ ಈ ಮೂರು ಪಾಸ್ ಪೋರ್ಟ್’ಗಳನ್ನು ಪಡೆದ ಬಗೆ ಹೇಗೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.
ಬಂಧಿಸಲಾಗಿರುವ ನೀರವ್ ಅವರನ್ನು ವಾಂಡ್ಸ್ ವರ್ಥ್ ನ ಕಾರಾಗೃಹದಲ್ಲಿ ಇರಿಸಲಾಗುವುದು ಎನ್ನಲಾಗುತ್ತಿದೆ. ಈ ಕಾರಾಗೃಹ ಪಶ್ಚಿಮ ಯುರೋಪ್ ನಲ್ಲಿ ಅತಿ ದೊಡ್ಡದು.