ಬೀಜಿಂಗ್, ಮಾ 23(MSP): ಪೂರ್ವ ಚೀನಾದಲ್ಲಿನ ರಾಸಾಯನಿಕ ಸ್ಥಾವರದಲ್ಲಿ ಸ್ಪೋಟ ಸಂಭವಿಸಿದ ಪರಿಣಾಮ 64 ಜನ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಘಟನೆಯಿಂದ 28 ಜನ ನಾಪತ್ತೆಯಾಗಿದ್ದು, 640ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ಚೀನದ ಜಿಯಾಂಗು ಪ್ರಾಂತ್ಯದಲ್ಲಿ ಗುರುವಾರ ರಾತ್ರಿ ರಸಗೊಬ್ಬರ ಕಾರ್ಖಾನೆಯೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಬೃಹತ್ ಸ್ಫೋಟ ಸಂಭವಿಸಿದೆ. ಸುರಕ್ಷಿತಾ ನಿಯಮದ ಉಲ್ಲಂಘನೆಯಿಂದ ಸ್ಪೋಟ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಇತ್ತೀಚಿನ ವರ್ಷದಲ್ಲಿ ಚೀನದಲ್ಲಿ ನಡೆದಿರುವ ಅತ್ಯಂತ ಭೀಕರ ಕೈಗಾರಿಕಾ ಅವಘಡ ಇದಾಗಿದೆ.
ಸ್ಪೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಟ್ಟಡಗಳು ತರಗೆಲೆಯಂತೆ ನೆಲಕ್ಕುರುಳಿದ್ದು, ಇಡೀ ಪ್ರದೇಶ ಧೂಳಿನಿಂದ ತುಂಬಿಹೋಗಿದೆ. ಸ್ಪೋಟದ ಪ್ರದೇಶ ಸುತ್ತಮುತ್ತ ಕಟ್ಟಡದ ಅವಶೇಷ, ನಜ್ಜುಗುಜ್ಜಾದ ಕಾರುಗಳು ಮತ್ತು ಕಾರ್ಮಿಕರ ರಕ್ತಸಿಕ್ತ ದೇಹಗಳು ಕಾಣಸಿಗುತ್ತವೆ ಎಂದು ಅಲ್ಲಿನ ಸ್ಥಳೀಯವಾಹಿನಿಗಳು ವರದಿ ಮಾಡಿದೆ.
ಅವಘಡಕ್ಕೆ ತುತ್ತಾದ ಸುಮಾರು 3,000 ಕಾರ್ಮಿಕರನ್ನು ಮತ್ತು ಸುತ್ತಮುತ್ತಲಿನ 1,000ಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. 88 ಮಂದಿಯನ್ನು ರಕ್ಷಿಸಲಾಗಿದೆ ಎಂದು ತುರ್ತುಸ್ಥಿತಿ ವ್ಯವಸ್ಥಾಪನ ಸಚಿವಾಲಯ ತಿಳಿಸಿದೆ.