ಲಂಡನ್, ಮಾ 29(SM): ಉದ್ದೇಶಪೂರ್ವಕ ಸುಸ್ತೀದಾರ ನೀರವ್ ಮೋದಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಲಂಡನ್ ನ್ಯಾಯಾಲಯ ನೀರವ್ ಮೋದಿಗೆ ಮತ್ತೆ ಜಾಮೀನು ನಿರಾಕರಿಸಿದೆ.
ಲಂಡನ್ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ನೀರವ್ ಮೋದಿ ಅವರು ಜಾಮೀನಿಗಾಗಿ ಎರಡನೇ ಬಾರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಅರ್ಜಿ ತಿರಸ್ಕರಿಸಿದ್ದು, ಎರಡನೇ ಬಾರಿಯೂ ಬಿಡುಗಡೆ ಕನಸಿನ ಮಾತಾಗಿದೆ.
ನೀರವ್ ಮೋದಿ ಅವರು ಸಾಕ್ಷ್ಯದಾರರೊಬ್ಬರಿಗೆ ಬೆದರಿಕೆ ಒಡ್ಡಿದ್ದಾರೆ. ಇದಲ್ಲದೆ ತಮ್ಮ ಬಂಧನವನ್ನು ಮುಂದೂಡಲು ಲಂಚದ ಆಮೀಷ ಒಡ್ಡಿದ್ದಾರೆ ಎಂದು ನ್ಯಾಯಾಲಯದಲ್ಲಿ ನೀರವ್ ವಿರುದ್ಧ ವಾದ ಮಂಡಿಸಲಾಗಿತ್ತು. ನೀರವ್ ಮೋದಿಗೆ ಜಾಮೀನು ನೀಡಿದರೆ, ಆತ ಮತ್ತೆ ದೇಶಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳಬಹುದು ಎಂದು ಸಹ ವಕೀಲರು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು. ನೀರವ್ ಮೋದಿಯು ವನುತುವ ಎಂಬ ದ್ವೀಪ ದೇಶದ ಪೌರತ್ವ ಪಡೆಯಲು ಯತ್ನಿಸಿದ್ದಾರೆ ಎಂದು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ವಕೀಲರು ನ್ಯಾಯಾಲಯಕ್ಕೆ ನೀಡಿದ್ದಾರೆ.
ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ 2ನೇ ಬಾರಿಯೂ ಕೂಡ ನೀರವ್ ಮೋದಿಗೆ ಜಾಮೀನು ನಿರಾಕರಿಸಿದೆ. ಇನ್ನು ಮುಂದಿನ ವಿಚಾರಣೆ ಏಪ್ರಿಲ್ 26ಕ್ಕೆ ಮುಂದೂಡಲಾಗಿದ್ದು, ಅಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ.