ಕಠ್ಮಂಡು, ಏ 1 (MSP): ನೇಪಾಳದಲ್ಲಿ ಉಂಟಾದ ಚಂಡಮಾರುತಕ್ಕೆ ಈವರೆಗೆ 25 ಮಂದಿ ಬಲಿಯಾಗಿದ್ದು, 400 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ಸಂಜೆ ವೇಳೆ ನೇಪಾಳದ ದಕ್ಷಿಣ ಪ್ರದೇಶವಾದ ಬಾರಾ ಜಿಲ್ಲೆ ಹಾಗೂ ಪರ್ಸಾ ಜಿಲ್ಲೆಗಳು ಚಂಡಮಾರುತಕ್ಕೆ ತತ್ತರಿಸಿ ಹೋಗಿದ್ದು, ಭಾರೀ ಮಳೆಯಿಂದ ಜೀವಹಾನಿಯಾಗಿದೆ ಎಂದು ತಿಳಿದುಬಂದಿದೆ. ವಿಪರೀತ ಮಳೆಯ ಪರಿಸ್ಥಿತಿ ಮುಂದುವರಿದಿರುವುದರಿಂದ ಇನ್ನು ಸಾವಿನ ಸಂಖ್ಯೆ ಹೆಚ್ಚಬಹುದೆಂದು ಪರ್ಸಾ ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತದಿಂದ ಸಂತ್ರಸ್ತ ಗಾಯಾಳುಗಳನ್ನು ಬೇರೆ ಬೆರೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನೇಪಾಳ ಸರ್ಕಾರ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಮುಂದುವರಿಸಿದ್ದು ಎರಡು ಬೆಟಾಲಿಯನ್ ಗಳನ್ನು ಚಂಡಮಾರುತ ಪೀಡಿತ ಈ ಎರಡು ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ’ತುರ್ತು ನಿಗಾ ಹೆಲಿಕಾಪ್ಟರ್ ಗಳು ಕಾರ್ಯಾಚರಣೆ ನಡೆಸುತ್ತಿದೆ ನಮ್ಮ ಭದ್ರತಾ ಸಂಸ್ಥೆಗಳು ಹವಾಮಾನ ತಿಳಿಯಾಗುವುದನ್ನು ಕಾಯುತ್ತಿದೆ ’ಎಂದು ಪ್ರಧಾನಿಗಳ ಆಪ್ತ ಸಲಹೆಗಾರ ಬಿಷ್ಣು ರಿಮಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.