ದೋಂಬ್,ಏ06(AZM):ಮೊಝಾಂಬಿಕ್ ದೇಶದ ಮನಿಕಾ ಪ್ರಾಂತ್ಯದ ದೊಂಬ್ ಪ್ರದೇಶದಲ್ಲಿ ಉಂಟಾದ ಭೀಕರ ಚಂಡಮಾರುತದಿಂದ ಹಲವಾರು ಮನೆಗಳು ಹಾನಿಗೀಡಾಗಿದ್ದು, ಎಷ್ಟೋ ಜನರು ನಿರಾಶ್ರಿತರಾಗಿದ್ದಾರೆ.ಈ ನಡುವೆ ಹೆರಿಗೆ ನೋವಿಂದ ನರಳುತ್ತಿದ್ದ ತಾಯಿಯೋರ್ವಳು ಮರದ ತುದಿಯಲ್ಲೇ ತನ್ನ ಮಗುವಿಗೆ ಜನ್ಮ ನೀಡಿದ್ದು, ಮನಕಲಕುವ ತನ್ನ ಆ ಕಠಿಣ ಸಮಯವನ್ನು ಇದೀಗ ಹಂಚಿಕೊಂಡಿದ್ದಾಳೆ.
ಭೀಕರ ಪ್ರವಾಹಕ್ಕೆ ಎಷ್ಟೋ ಜನರಿಗೆ ನೆಲೆ ಇಲ್ಲದ್ದಾಗಿದ್ದು, ದೋಂಬ್ ಪ್ರದೇಶದ ಸುಧಾರಿತ ವಸತಿ ಪ್ರದೇಶದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಇಲ್ಲೇ ಆಶ್ರಯ ಪಡೆಯುತ್ತಿರುವ ಬಾಣಂತಿ ಮಹಿಳೆಯಾಗಿರುವ ಅಮೇಲಿಯಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಾನು ತುಂಬು ಗರ್ಭಿಣಿಯಾಗಿದ್ದು, ತನ್ನ 2ರ ಹರೆಯದ ಮಗನ ಜೊತೆ ಮನೆಯಲ್ಲಿದ್ದ ವೇಳೆ ಒಂದೇ ಬಾರಿ ಅಪ್ಪಳಿಸಿದ ಚಂಡಮಾರುತದಿಂದ ಮನೆಯೊಳಗೇ ಪ್ರವಾಹ ಹರಿಯತೊಡಗಿತು. ಈ ಹಿನ್ನಲೆ ದಿಕ್ಕು ದೆಸೆ ಇಲ್ಲದ ನಾನು ಒಂದು ಮಾವಿನ ಮರದ ತುದಿ ಏರಿ ಕುಳಿತೆ. ಅಲ್ಲೇ ನನಗೆ ಹೆರಿಗೆ ನೋವು ಉಂಟಾಗಿ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತೆ. ಬದುಕಿ ಬರುವೆ ಅನ್ನುವ ನಂಬಿಕೆ ನನಗೆ ಇರಲಿಲ್ಲ. 2 ದಿನಗಳ ಕಾಲ ನವಜಾತ ಶಿಶು ಸಾರಾಳನ್ನು ಹಿಡಿದುಕೊಂಡು ಮಾವಿನ ಮರದ ತುದಿಯಲ್ಲೇ ಇರಬೇಕಾಗಿ ಬಂತು. ಬಳಿಕ ನೆರೆಯವರು ಸಹಾಯ ಮಾಡಿ ಮರದಿಂದ ಕೆಳಗೆ ಇಳಿಸಿ ಇಲ್ಲಿಗೆ ಬಂದು ತಲುಪಿದೆವು ಎಂದು ತನ್ನ ಅನುಭವವನ್ನು ಹೇಳಿದರು. .
ದೊಂಬ್ ಪ್ರದೇಶದಲ್ಲಿ ಸುಮಾರು 3,000 ಮಂದಿ ಸ್ವಂತ ವ್ಯವಸ್ಥೆಯಲ್ಲಿ ಉಳಿದುಕೊಂಡಿದ್ದಾರೆ. ಇವರ ಪೈಕಿ ಹಸುಳೆ ಸಾರಾ ಕೂಡಾ ಒಬ್ಬಳು. ಅಚ್ಚರಿಯೊಂದಿಗೆ ಈ ಜಗತ್ತಿಗೆ ಕಾಲಿಟ್ಟ ಸಾರಾ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ. ತಾಯಿ ಅಮೇಲಿಯಾ ಸತತವಾಗಿ ಎದೆಹಾಲುಣಿಸಿ ಮಗುವನ್ನು ರಕ್ಷಿಸಿಕೊಂಡಿದ್ದಾರೆ. ಇದೀಗ ಹಾನಿಗೀಡಾದ ಪ್ರದೇಶದ ಇತರ ತಾಯಂದಿರು ಇವರ ನೆರವಿಗೆ ಬಂದಿದ್ದಾರೆ.