ಇಸ್ಲಾಮಾಬಾದ್, ಎ13(SS): ಪಾಕಿಸ್ತಾನದಲ್ಲಿರುವ 400ಕ್ಕೂ ಅಧಿಕ ದೇವಾಲಯಗಳನ್ನು ಜೀಣೋದ್ಧಾರ ಮಾಡಲು ಪ್ರಧಾನಿ ಇಮ್ರಾನ್ ಖಾನ್ ಮುಂದಾಗಿದ್ದಾರೆ ಎಂದು ಪಾಕ್ ಸರ್ಕಾರ ಮಾಹಿತಿ ನೀಡಿದೆ.
ಕೆಲ ದಿನಗಳ ಹಿಂದೆಯಷ್ಟೇ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಿದ್ಧ ಎಂದು ಪದೇಪದೆ ಹೇಳುತ್ತಿದ್ದ ಪಾಕಿಸ್ತಾನ ಇದೀಗ ಮತ್ತೊಂದು ಮಾಹಿತಿಯನ್ನು ಹೊರ ಹಾಕಿದೆ. ನರೇಂದ್ರ ಮೋದಿ ಪ್ರಧಾನಿಯಾದರೆ ಶಾಂತಿ ಮಾತುಕತೆಗೆ ಅನುಕೂಲವಾಗುತ್ತದೆ ಎಂದು ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು. ಇದೀಗ ಅಲ್ಲಿನ 400ಕ್ಕೂ ಅಧಿಕ ದೇವಾಲಯಗಳನ್ನು ಜೀಣೋದ್ಧಾರ ಮಾಡಲು ಮುಂದಾಗಿದ್ದಾರೆ ಎಂದು ಪಾಕ್ ಸರ್ಕಾರ ಮಾಹಿತಿ ನೀಡಿದೆ.
ಸಿಯಾಲ್ಕೋಟ್ ಮತ್ತು ಪೇಶಾವರದಲ್ಲಿರುವ ಐತಿಹಾಸಿಕ ದೇವಾಲಯಗಳಿಂದ ಜೀಣೋದ್ಧಾರ ಪ್ರಕ್ರಿಯೆ ಆರಂಭವಾಗಲಿದೆ. ಸಿಯಾಲ್ಕೋಟ್ನ ಜಗನ್ನಾಥ ದೇವಾಲಯ ಮತ್ತು 1000 ವರ್ಷಗಳಷ್ಟು ಪುರಾತನವಾದ ಶಿವಾಲಯದ ಜೀಣೋದ್ಧಾರಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದೆ.
1992ರಲ್ಲಿ ಬಾಬ್ರಿ ಮಸೀದಿ ದ್ವಂಸ ಪ್ರಕರಣದ ಸಂದರ್ಭ ಭಾರತದಲ್ಲಿ ಉಂಟಾದ ಗಲಭೆ ಬಳಿಕ ಈ ದೇವಾಲಯವನ್ನು ಮುಚ್ಚಲಾಗಿತ್ತು. ಪೇಷಾವರದಲ್ಲಿರುವ ಗೋರಖ್ನಾಥ ದೇವಾಲಯವನ್ನೂ ಪುನರುತ್ಥಾನಗೊಳಿಸಲಾಗುತ್ತದೆ. ಪ್ರತಿವರ್ಷ ಕೆಲ ದೇವಾಲಯಗಳಂತೆ ಹಲವು ಹಂತಗಳಲ್ಲಿ ಜೀಣೋದ್ಧಾರ ಪೂರ್ಣಗೊಳಿಸಿ ಹಿಂದುಗಳಿಗೆ ಒಪ್ಪಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ತಿಳಿದುಬಂದಿದೆ.