ಮೆಲ್ಬೋರ್ನ್,ಎ.14:ಚಲಿಸುತ್ತಿದ್ದ ಕಾರಿನಿಂದ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಓರ್ವ ಸೆಕ್ಯುರಿಟಿ ಗಾರ್ಡ್ ಮೃತಪಟ್ಟು,ಇತರ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನೈಟ್ ಕ್ಲಬ್ ಬಳಿ ಇಂದು ನಡೆದಿದೆ.
ಸಾಕಷ್ಟು ಮನೋರಂಜನಾ ತಾಣಗಳಿರುವ ಮೆಲ್ಬೋರ್ನ್ನ ಉಪನಗರ ಪ್ರಹ್ರಾನ್ನಲ್ಲಿ ರವಿವಾರ ನಸುಕಿನ 3:20ರ ಸುಮಾರಿಗೆ ಮಷಿನ್ ನೈಟ್ಕ್ಲಬ್ನ ಹೊರಗೆ ಈ ಗುಂಡಿನ ದಾಳಿ ನಡೆದಿದೆ. ವಾರಂತ್ಯವಾದ್ದರಿಂದ ನೈಟ್ಕ್ಲಬ್ನಲ್ಲಿ ಸಾಕಷ್ಟು ಜನರಿದ್ದರು ಎನ್ನಲಾಗಿದೆ.
ಮೂವರು ಸೆಕ್ಯುರಿಟಿ ಗಾರ್ಡ್ಗಳು ಮತ್ತು ಓರ್ವ ವ್ಯಕ್ತಿ ನೈಟ್ಕ್ಲಬ್ನೊಳಗೆ ಪ್ರವೇಶಿಸಲು ನಿಂತುಕೊಂಡಿದ್ದ ಸಂದರ್ಭ ಈ ದಾಳಿ ನಡೆದಿದ್ದು, ಕಾರೊಂದರಿಂದ ಗುಂಡುಗಳನ್ನು ಹಾರಿಸಿರುವಂತೆ ಕಂಡುಬಂದಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಆಯಂಡ್ರೂ ಸ್ಟಾಂಪರ್ ತಿಳಿಸಿದ್ದಾರೆ.
ತೀರ ಸಮೀಪದಿಂದ ಗುಂಡುಗಳನ್ನು ಹಾರಿಸಲಾಗಿದ್ದು, ಗಂಭೀರ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಓರ್ವ ಸೆಕ್ಯುರಿಟಿ ಗಾರ್ಡ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯ ದೈನಿಕವು ವರದಿ ಮಾಡಿದೆ. ಆದರೆ ಇದು ಭಯೋತ್ಪಾದಕ ದಾಳಿಯೆನ್ನಲು ಯಾವುದೇ ಸುಳಿವುಗಳು ಈವರೆಗೆ ಲಭ್ಯವಾಗಿಲ್ಲ.