ದುಬೈ, ಏ 17(Daijiworld News/MSP): ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ 15 ಗ್ರಾಹಕರ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ಬೆದರಿಕೆ ಒಡ್ಡಿದ ಅಪರಾಧಕ್ಕಾಗಿ 33ರ ಹರೆಯದ ಭಾರತೀಯ ಐಟಿ ಪ್ರೋಗ್ರಾಮರ್ ಗೆ ದುಬೈ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ಗಡೀಪಾರು ಶಿಕ್ಷೆಯನ್ನು ವಿಧಿಸಿದೆ.
ಶಿಕ್ಷೆಗೆ ಗುರಿಯಾದ ಭಾರತೀಯನ ಹೆಸರು ಮತ್ತು ಮಾಹಿತಿಯನ್ನು ಬಹಿರಂಗವಾಗಿಲ್ಲ. ಮಾಹಿತಿ ಪ್ರಕಾರ ಈತ ಕಂಪನಿಯೊಂದರಲ್ಲಿ ಐಟಿ ಪ್ರೋಗ್ರಾಮರ್ ಆಗಿ ದುಡಿಯುತ್ತಿದ್ದ. ಸಂಸ್ಥೆಯೂ ಆತನ ವೇತನದಿಂದ 1,080 ಡಾಲರ್ ಮೊತ್ತವನ್ನು ಕಡಿತ ಮಾಡಿರುವುದಕ್ಕೆ ಸಿಟ್ಟುಕೊಂಡ ಆತ ಸಂಸ್ಥೆಗೆ ರಾಜೀನಾಮೆ ಸಲ್ಲಿಸಿ ಸಹೋದ್ಯೋಗಿಗೆ ಮೇಸೆಜ್ ಮಾಡಿ ’ಸಂಸ್ಥೆ ನನ್ನ ಸಂಬಳದಿಂದ ಕಡಿತ ಮಾಡಿದ ನಗದನ್ನು ಹಿಂತಿರುಗಿಸಿದಿದ್ದರೆ ಸಂಸ್ಥೆಯ ಗ್ರಾಹಕರ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವ ಬೆದರಿಕೆ’ ಹಾಕಿದ್ದ.
ಇದೀಗ ದುಬೈ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದು ಅದನ್ನು ಅನುಭವಿಸಿದ ಬಳಿಕ ಆತನನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದೆಂದು ವರದಿಗಳು ತಿಳಿಸಿವೆ.