ಇಸ್ರೇಲ್, ಡಿ 01 (DaijiworldNews/MR): ಇಸ್ರೇಲ್ ಮತ್ತು ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮವು ಕೊನೆಗೊಂಡಿದ್ದು, ಇದೀಗ ಮತ್ತೆ ಗಾಜಾದಲ್ಲಿ ಘರ್ಷಣೆಗಳು ಪ್ರಾರಂಭವಾಗಿದೆ.
ನವೆಂಬರ್ 24 ರಂದು ಪ್ರಾರಂಭವಾದ ಹೋರಾಟದಲ್ಲಿ ನಾಲ್ಕು ದಿನಗಳ ವಿರಾಮದ ನಂತರ, ಮತ್ತೆ ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಈಗ, ಒಂದು ವಾರದ ನಂತರ ಒಪ್ಪಂದವು ಕೊನೆಗೊಂಡಿದೆ.
ಇನ್ನು ಇಂದು ಬೆಳಗ್ಗೆ 7 ಗಂಟೆಯೊಳಗೆ ಬಿಡುಗಡೆಯಾದ ಕೈದಿಗಳ ಪಟ್ಟಿಯನ್ನು ಹಮಾಸ್ ಹಸ್ತಾಂತರಿಸಿಲ್ಲ ಎಂದು ಇಸ್ರೇಲ್ ಮಾಹಿತಿ ನೀಡಿದೆ. ಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿದೆ ಮತ್ತು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ರಾಕೆಟ್ ಗಳನ್ನು ಉಡಾಯಿಸಿದೆ ಎಂದು ಇಸ್ರೇಲ್ ನ ರಕ್ಷಣಾ ಪಡೆಗಳು ಆರೋಪಿಸಿವೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು, ಇದರಿಂದ ಗಾಜಾ ಪಟ್ಟಿಯಲ್ಲಿರುವ 30 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟಿತು. ಈ ಒಪ್ಪಂದವು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ದಶಕಗಳಿಂದ ನಡೆಯುತ್ತಿರುವ ಹಿಂಸಾತ್ಮಕ ಸಂಘರ್ಷವನ್ನು ತಡೆಯುವ ಒಪ್ಪಂದವಾಗಿತ್ತು.
ಅಕ್ಟೋಬರ್ 7ರಂದು, ಹಮಾಸ್ ಉಗ್ರರರು 5,000 ರಾಕೆಟ್ ಗಳನ್ನು ಬಳಸಿ ಇಸ್ರೇಲ್ ಮೇಲೆ ದಾಳಿ ನಡೆಸಿದರು, ಇದರ ಪರಿಣಾಮವಾಗಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ, ಗಾಜಾದಲ್ಲಿ 10,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.
ಹಮಾಸ್ ಅನ್ನು ಸೋಲಿಸುವವರೆಗೂ ಯುದ್ಧ ಕೊನೆಗೊಳ್ಳುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇದಲ್ಲದೆ, ನಾವು ಯುದ್ಧವನ್ನು ಪ್ರಾರಂಭಿಸಿಲ್ಲ, ಆದರೆ ಯುದ್ಧ ನಮ್ಮಿಂದಲೇ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ.