ಕೊಲಂಬೋ, ಏ.21(Daijiworld News/AZM):ಈಸ್ಟರ್ ದಿನ ಬೆಳಿಗ್ಗೆಯೇ ಕೊಲಂಬೋ ಹಾಗೂ ನೆಗೊಂಬೋ ನಗರಗಳ ಚರ್ಚ್ ಹಾಗೂ ಹೋಟೇಲ್ ಗಳಲ್ಲಿ ಬಾಂಬ್ ಸ್ಫೋಟ ನಡೆದಿದ್ದು, 42ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ. 300ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
ಈಸ್ಟರ್ ದಿನ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲೆಂದು ಚರ್ಚ್ ಗೆ ಹೋದ ಭಕ್ತರಿಗೆ ಆಘಾತ ಎದುರಾಗಿದೆ. ಶ್ರೀಲಂಕಾದಲ್ಲಿ ಒಟ್ಟು 5 ಕಡೆಗಳಲ್ಲಿ ಸರಣಿ ಸ್ಫೋಟ ಸಂಭವಿಸಿರುವ ವರದಿಗಳು ಬಂದಿವೆ. ಈ ಪೈಕಿ ಮೂರು ಚರ್ಚ್ ಗಳಲ್ಲಿ ಹಾಗೂ ಎರಡು ಹೋಟೆಲ್ ಗಳಲ್ಲಿ ಸ್ಫೋಟಗಳಾಗಿವೆ. ಇನ್ನು ಯಾವ ಉಗ್ರ ಸಂಘಟನೆ ಕೂಡಾ ಈ ಸರಣಿ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.
ಗಾಯಗೊಂಡ 300ಕ್ಕೂ ಹೆಚ್ಚು ಜನರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಏಕಕಾಲದಲ್ಲಿ ಸ್ಫೋಟಗಳು ಸಂಭವಿಸುತ್ತಿದ್ದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಈಸ್ಟರ್ ಸಂಡೇ ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ರೈಸ್ತ ಬಾಂಧವರು ತೊಡಗಿದ್ದ ಸಂದರ್ಭದಲ್ಲೇ ಬೆಳಗ್ಗೆ 8.45ರ ಸಮಯದಲ್ಲಿ ಮೂರು ಚರ್ಚ್ಗಳಲ್ಲಿ ಹೆಚ್ಚು-ಕಡಿಮೆ ಏಕಕಾಲದಲ್ಲೇ ಸರಣಿ ಸ್ಫೋಟಗಳು ಸಂಭವಿಸಿತು.
ಈ ಭೀಕರ ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಹತರಾದರು ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ತಿಳಿಸಿದ್ದಾರೆ. ಕೊಲಂಬೋದ ಸೆಂಟ್ ಆಂಟನಿ ಚರ್ಚ್, ಪಶ್ಚಿಮ ಕರಾವಳಿ ಪಟ್ಟಣ ನೆಗೊಂಬೋದ ಸೆಂಟ್ ಸಬ್ಯಾಸ್ಟಿಯನ್ ಚರ್ಚ್ ಹಾಗೂ ಪೂರ್ವ ಬಟ್ಟಿಕಲೋವಾದ ಮತ್ತೊಂದು ಚರ್ಚ್ನಲ್ಲಿ ಈ ಸ್ಫೋಟಗಳು ಸಂಭವಿಸಿತು. ಅಲ್ಲದೆ, ಶಾಂಗ್ರಿಲ್ಲಾ, ಸಿನ್ನಮೋನ್ಗ್ರ್ಯಾಂಡ್ ಹಾಗೂ ಕಿಂಗ್ಸ್ ಬರಿ ಪ್ರದೇಶದ ಮೂರು ಪಂಚತಾರಾ ಹೊಟೇಲ್ಗಳಲ್ಲೂ ಬಾಂಬ್ಸ್ಫೋಟಗಳು ಸಂಭವಿಸಿದವು.
ಈಸ್ಟರ್ ಪ್ರಯುಕ್ತ ಪ್ರವಾಸಿಗರಿಂದ ತುಂಬಿದ್ದ ಈ ಫೈವ್ಸ್ಟಾರ್ ಹೊಟೇಲ್ಗಳಲ್ಲಿ ಏಕಕಾಲದಲ್ಲಿ ಸ್ಫೋಟಗಳು ಸಂಭವಿಸಿರುವುದರಿಂದ ಇಲ್ಲಿ ಕೂಡ ಸಾವು-ನೋವು ವರದಿಯಾಗಿದೆ. ಗಾಯಗೊಂಡ 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕೊಲಂಬೋ ನ್ಯಾಷನಲ್ ಹಾಸ್ಪಿಟಲ್ ವಕ್ತಾರ ಡಾ.ಸ್ಯಾಮೆಂಡಿ ಸಮರಕೂನ್ ತಿಳಿಸಿದ್ದಾರೆ.
ನಮ್ಮ ಚರ್ಚ್ ಮೇಲೆ ಬಾಂಬ್ ದಾಳಿ ನಡೆದಿದೆ. ದಯವಿಟ್ಟು ರಕ್ಷಣೆಗೆ ಬನ್ನಿ ಎಂದು ಸೆಂಟ್ ಸಾಬ್ಯಸ್ಟಿಯನ್ ಚರ್ಚ್ನ ಪಾದ್ರಿಯೊಬ್ಬರು ಸ್ಫೋಟ ಸಂಭವಿಸಿದ ಕೆಲವು ಸೆಕೆಂಡ್ಗಳ ನಂತರ ಫೇಸ್ಬುಕ್ನಲ್ಲಿ ಮನವಿ ಮಾಡಿದ್ದರು. ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಎಲ್ಟಿಟಿಇ ಉಗ್ರಗಾಮಿಗಳು ಸಕ್ರಿಯವಾಗುತ್ತಿದ್ದಾರೆ ಎಂಬ ವರದಿ ಬೆನ್ನಲ್ಲೇ ಈ ಸರಣಿ ಸ್ಫೋಟ ಮತ್ತು ಸಾವು-ನೋವು ಸಂಭವಿಸಿದೆ. ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಈ ಕುಕೃತ್ಯವೆಸಗಿದ ಹಂತಕರಿಗಾಗಿ ಶ್ರೀಲಂಕಾ ಸೇನಾಪಡೆ ಸಮರೋಪಾದಿಯ ನಿಗ್ರಹ ಕಾರ್ಯಾಚರಣೆಗೆ ಮುಂದಾಗಿದೆ.