ಕೊಲಂಬೊ, ಎ22(Daijiworld News/SS): ಪವಿತ್ರ ಈಸ್ಟರ್ ಹಬ್ಬದ ದಿನ ಶ್ರೀಲಂಕಾದ ಕೊಲಂಬೊದಲ್ಲಿ ಬಾಂಬ್ ದಾಳಿ ನಡೆದಿದ್ದು, ರಕ್ತದೋಕುಳಿ ಹರಿದಿದೆ.
8 ಸರಣಿ ಬಾಂಬ್ ಸ್ಫೋಟಗಳ ಮೂಲಕ 215 ಜನರ ಮಾರಣಹೋಮ ನಡೆದಿದ್ದು, ಈ ಪೈಶಾಚಿಕ ಕೃತ್ಯದ ಹಿಂದೆ ಯಾವ ಉಗ್ರ ಸಂಘಟನೆಗಳ ಕೈವಾಡವಿದೆ ಎಂಬುದು ಈವರೆಗೂ ಸ್ಪಷ್ಟಗೊಂಡಿಲ್ಲ.
ಆದರೆ, ಈ ದಾಳಿಯ ಹಿಂದೆ ತೌಹೀದ್ ಜಮಾತ್ ಉಗ್ರ ಸಂಘಟನೆಯ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಘಟನೆ ತಮಿಳುನಾಡಿನಲ್ಲಿಯೂ ಸಕ್ರಿಯವಾಗಿದೆ ಎಂದು ಹೇಳಲಾಗುತ್ತಿದೆ.
ಎನ್ಟಿಜೆಯು ಮುಸ್ಲಿಂ ಮೂಲಭೂತವಾದಿ ಸಂಘಟನೆಯಾಗಿದೆ. ಕಳೆದ ವರ್ಷ ಶ್ರೀಲಂಕಾದ ಹಲವೆಡೆ ಬುದ್ಧನ ಪ್ರತಿಮೆಗಳನ್ನು ನಾಶಪಡಿಸಿದ್ದ ಆರೋಪ ಈ ಸಂಘಟನೆ ವಿರುದ್ಧ ಕೇಳಿಬಂದಿತ್ತು.
ಈ ರೀತಿಯ ಭೀಕರ ದಾಳಿ ನಡೆಯುವ ಸಾಧ್ಯತೆಗಳಿವೆ ಎಂಬ ಗುಪ್ತಚರ ಮಾಹಿತಿಯನ್ನು ಶ್ರೀಲಂಕಾ ಪೊಲೀಸ್ ಮುಖ್ಯಸ್ಥ ಪುಜುತ್ ಜಯಸುಂದ್ರ 10 ದಿನಗಳ ಹಿಂದೆಯೇ ಸರಕಾರದ ಗಮನಕ್ಕೆ ತಂದಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಈ ರಕ್ತಪಾತಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಸುಮಾರು 3 ದಶಕಗಳ ಕಾಲ ಎಲ್ಟಿಟಿಇ ಉಗ್ರರ ಹಿಂಸಾಚಾರದಲ್ಲಿ ಬೆಂದುಹೋಗಿದ್ದ ದ್ವೀಪ ರಾಷ್ಟ್ರದಲ್ಲಿ 2009ರ ಬಳಿಕ ನೆಲೆಸಿದ್ದ ಶಾಂತಿಗೆ ಭಂಗ ಬಂದಿದೆ.