ವಾಷಿಂಗ್ಟನ್, ಏ 23 (Daijiworld News/MSP): ಇರಾನ್ನಿಂದ ಭಾರತಕ್ಕೆ ತೈಲ ಆಮದು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಭಾರತ, ಚೀನಾ ಸೇರಿ ಒಟ್ಟು 8 ರಾಷ್ಟ್ರಗಳಿಗೆ ನೀಡಿದ್ದ ತೈಲ ಆಮದು ವಿನಾಯಿತಿಯನ್ನು ಅಮೆರಿಕ ರದ್ದುಗೊಳಿಸಿದೆ. ಈ ಕುರಿತು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಕಳೆದ ವರ್ಷವೇ ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ಇರಾನ್ ಜತೆಗೆ ಪರಮಾಣು ಒಪ್ಪಂದ ರದ್ದುಗೊಳಿಸಿದ ಅಮೆರಿಕ, ಇರಾನ್ ನಿಂದ ಯಾವ ದೇಶವೂ ತೈಲ ಅಮದುಮಾಡಿಕೊಳ್ಳಬಾರದು ಎಂದು ಷರತ್ತು ವಿಧಿಸಿತ್ತು.ಆದರೆ ಇರಾನ್ ಜತೆಗಿನ ವ್ಯವಹಾರಕ್ಕೆ ಭಾರತ ಸಹಿತ 8 ರಾಷ್ಟ್ರಗಳಿಗೆ ಮಾತ್ರ 6 ತಿಂಗಳು ವಿನಾಯಿತಿ ನೀಡಲಾಗಿತ್ತು.
ಆದರೆ ಈಗ ಈ ವಿನಾಯಿತಿಯನ್ನು ಮತ್ತೆ ಮುಂದುವರಿಸದಿರಲು ರಾಷ್ಟ್ರೀಯ ಭದ್ರತಾ ಸಲಹಾ ತಂಡಕ್ಕೆ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಈ ಮಧ್ಯೆ ಅಮೆರಿಕದ ನಿರ್ಧಾರದಿಂದ ತೈಲ ಆಮದಿನಲ್ಲಿ ಉಂಟಾಗುವ ಕೊರತೆಯನ್ನು ನೀಗಿಸಲು ಪರ್ಯಾಯ ವ್ಯವಸ್ಥೆಯನ್ನು ಭಾರತ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಮೇ 2ರೊಳಗೆ ಆದೇಶ ಸಂಪೂರ್ಣವಾಗಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ.