ದುಬೈ,23 (Daijiworld News/AZM):ದುಬೈಯಲ್ಲಿ ಕೆಲಸ ಮಾಡುತ್ತಿದ್ದ ಪಂಜಾಬ್ ಮೂಲದ ಕಾರ್ಪೆಂಟರ್ ಗೆ ಲಕ್ಕಿ ಡ್ರಾ ಮೂಲಕ ೨ ಕೋಟಿ ರೂಪಾಯಿಯ ಕಾರು ದೊರಕಿದೆ.
ದುಬೈನಲ್ಲಿ ಕೆಲಸ ಮಾಡುತ್ತಿರುವ ಪಂಜಾಬ್ ಮೂಲದ ಬಲ್ವೀರ್ ಸಿಂಗ್ 2 ಕೋಟಿ ರೂ. ಕಾರು ಬಹುಮಾನ ಗೆದ್ದುಕೊಂಡ ಅದೃಷ್ಟವಂತ. UAE ಟೆಲಿಕಾಂ ಕಂಪನಿ ಡು ಲಕ್ಕಿ ಡ್ರಾ ನಡೆಸಿತ್ತು. ದುಬೈ ಟೆಲಿಕಾಂ ಡು ಕಂಪನಿ ನಂಬರ್ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾ ನಡೆಸಿತ್ತು. ರಾಸ್ ಅಲ್ ಕೈಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಲ್ವೀರ್ಗೆ ಕಂಪನಿ ದುಬೈ ಟೆಲಿಕಾಂ ಡು ಮೊಬೈಲ್ ಸಿಮ್ ನೀಡಿತ್ತು. ಹೀಗಾಗಿ ಈತನ ನಂಬರ್ ಕೂಡ ಲಕ್ಕಿ ಡ್ರಾನಲ್ಲಿತ್ತು. ಒಂದು ದಿನ ದಿಢೀರ್ ಆಗಿ ಬಲ್ವೀರ್ಗೆ ಕರೆ ಬಂದಿತ್ತು. ನೀವು ಮೆಕ್ಲೆರೆನ್ 570ಎಸ್ ಸ್ಪೈಡರ್ ಕಾರು ಗೆದ್ದಿದ್ದೀರಿ ಎಂದಿದ್ದರು.
ಈ ಕರೆಯನ್ನು ಬಲ್ವೀರ್ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕಾರಣ ಈ ರೀತಿಯ ಹಲವು ಕರೆ ಹಾಗು ಮೆಸೇಜ್ಗಳು ಹಾಗೂ ಮೋಸ ಹೋದವರ ಕತೆ ಬಲ್ವೀರ್ ಈಗಾಗಲೇ ಕೇಳಿದ್ದರು. ಕರೆ ಬಳಿಕ ಮಸೇಜ್ ಕೂಡ ಬಂದಿತ್ತು. ಎರಡನೇ ಕರೆ ಬಂದಾಗ, ಬಲ್ವೀರ್ ಎಚ್ಚೆತ್ತುಕೊಂಡರು. ಗೂಗಲ್ನಲ್ಲಿ ಮೆಕ್ಲೆರೆನ್ 570ಎಸ್ ಸ್ಪೈಡರ್ ಕಾರು ಯಾವುದು? ಇದರ ಬೆಲೆ ಎಷ್ಟು ಅನ್ನೋದನ್ನು ಪರೀಶೀಲಿಸಿದ ಬಳಿಕ ಅವರಿಗೆ ತಿಳಿದು ಬಂತು ತಾನು ಗೆದ್ದಿರೋದು ಬರೋಬ್ಬರಿ 2 ಕೋಟಿ ರೂಪಾಯಿ ಕಾರು ಎಂದು.
ತಕ್ಷಣವೇ ಸಮೀಪದ ಶೋ ರೂಂಗೆ ತೆರಳಿದ ಬಲ್ವೀರ್ ಸಿಂಗ್ ಕಾರು ಪರಿಶೀಲಿಸಿ ತುಂಬಾನೇ ಖುಷಿಗೊಂಡಿದ್ದಾರೆ. ನಂಬರ್ ರಿಜಿಸ್ಟ್ರೇಶನ್ ಮಾಡಿ ಕಾರು ಪಡೆದುಕೊಂಡ ಬಲ್ವೀರ್ ಬಳಿ ಲೈಸೆನ್ಸ್ ಕೂಡ ಇಲ್ಲ. ಈ ಕಾರನ್ನು ನಿರ್ವಹಿಸೋ ಶಕ್ತಿ ಕೂಡ ಅವರಿಗಿಲ್ಲದ ಕಾರಣ ಸ್ಥಳೀಯ ಬ್ರೋಕರ್ ಮೂಲಕ ಮೆಕ್ಲೆರೆನ್ ಕಾರನ್ನು ಮಾರಾಟ ಮಾಡಿದ್ದಾರೆ. ಬ್ರೋಕರ್ ಚಾರ್ಜ್ ಹಾಗೂ ಇತರ ಬೆಲೆ ಕಡಿತಗೊಳಿಸಿ ಬಲ್ವೀರ್ಗೆ 1.13 ಕೋಟಿ ರೂಪಾಯಿ ದೊರಕಿದೆ.
ಕಾರು ಮಾರಾಟ ಮಾಡಿದ ಹಣದಲ್ಲಿ ತವರಿಗೆ ತೆರಳಿ ತಂದೆ ತಾಯಿ, ಪತ್ನಿ ಹಾಗೂ ಮಕ್ಕಳ ಜೊತೆ ಕೆಲ ಕಾಲ ಇರಬೇಕು ಎಂದು ಬಲ್ವೀರ್ ಯೋಚಿಸಿದ್ದಾರೆ.