ಕೊಲಂಬೊ,23 (Daijiworld News/AZM): :ಭಾರತದ ಗುಪ್ತಚರ ಇಲಾಖೆ ಶ್ರೀಲಂಕಾಕ್ಕೆ ಕೆಲವು ಗಂಟೆಗಳ ಮುನ್ನವೇ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವುದರ ಕುರಿತು ಎಚ್ಚರಿಕೆ ನೀಡಿತ್ತು ಎಂದು ಶ್ರೀಲಂಕಾದ ಪ್ರಧಾನಿ ರಾನೆಲ್ ವಿಕ್ರಮಸಿಂಗ್ ಹೇಳಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಶ್ರೀಲಂಕಾದಲ್ಲಿ ದಾಳಿ ನಡೆವ ಬಗ್ಗೆ ಮುನ್ಸೂಚನೆ ದೊರೆತಿತ್ತು, ಆದರೆ ಭದ್ರತೆಯಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಪ್ರಥಮ ಬಾಂಬ್ ದಾಳಿ ಆಗುವುದಕ್ಕೆ ಎರಡು ಗಂಟೆ ಮುನ್ನಾ ಭಾರತದ ಗುಪ್ತಚರ ಇಲಾಖೆಯು ಶ್ರೀಲಂಕಾದ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚ್ಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಿತ್ತು ಎಂದು ಭಾರತದ ಗುಪ್ತಚರ ಇಲಾಖೆ ಮತ್ತು ಶ್ರೀಲಂಕಾದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಇದೇ ರೀತಿಯ ಮಾಹಿತಿಯನ್ನು ಏಪ್ರಿಲ್ 4 ಮತ್ತು ಏಪ್ರಿಲ್ 20 ರಂದು ಸಹ ಶ್ರೀಲಂಕಾದ ಗುಪ್ತಚರ ಇಲಾಖೆಗೆ ನೀಡಲಾಗಿತ್ತು, ಆದರೆ ಶ್ರೀಲಂಕಾದ ವಿದೇಶಾಂಗ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ ಎನ್ನಲಾಗಿದೆ.
ಏ.21 ರವಿವಾರದಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಈವರೆಗೆ 321 ಮಂದಿ ಹತರಾಗಿದ್ದು, 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.