ಕೊಲಂಬೋ, ಏ 24 (Daijiworld News/MSP): ಈಸ್ಟರ್ ಭಾನುವಾರ ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಒಂಭತ್ತು ಜನ ಆತ್ಮಾಹುತಿ ದಾಳಿಕೋರರಲ್ಲಿ ಮಹಿಳೆಯೂ ಭಾಗಿಯಾಗಿದ್ದಳು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಈ ವಿಚಾರವನ್ನು ಶ್ರೀಲಂಕಾ ರಕ್ಷಣಾ ಮಂತ್ರಿ ರುವಾನ್ ವಿಜೆವರ್ಧೆನೆ ಟ್ವೀಟ್ ಮೂಲಕ ತಿಳಿಸಿದ್ದು, ಮಹಿಳೆಯೋರ್ವಳು ಆತ್ಮಾಹುತಿ ದಾಳಿಕೋರಳಾಗಿ ತನ್ನನ್ನು ತಾನು ಸ್ಪೋಟಿಸಿಕೊಂಡಿರುವ ಬಗ್ಗೆ ಮಾಹಿತಿ ದೊರಕಿದೆ ಎಂದಿದ್ದಾರೆ
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೆ ಇದೆ. ಈವರೆಗೆ 359 ಜನ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ದಾಳಿಗೆ ಸಂಬಂಧಿಸಿದಂತೆ 60 ಶಂಕಿತರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ಮಾಹಿತಿ ನೀಡಿದ್ದಾರೆ.
ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇನ್ನೂ ಅನೇಕ ಶಂಕಿತ ಉಗ್ರರು ಬಹಿರಂಗವಾಗಿ ಓಡಾಡಿಕೊಂಡಿದ್ದಾರೆ. ಆದ್ದರಿಂದ, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಜನರಿಗೆ ಎಚ್ಚರಿಸಿದ್ದಾರೆ.