ಇಂಡಿಯಾನ, ಜ 30(DaijiworldNews/AA): ಅಮೇರಿಕಾದಲ್ಲಿ ಭಾರತೀಯ ವಿದ್ಯಾರ್ಥಿ ವಿವೇಕ್ ಸೈನಿಯನ್ನು ನಿರ್ಗತಿಕನೊಬ್ಬ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಬೆನ್ನಲ್ಲೇ, ಮತ್ತೊರ್ವ ಭಾರತೀಯ ವಿದ್ಯಾರ್ಥಿಯ ಸಾವಿನ ಸುದ್ದಿ ವರದಿಯಾಗಿದೆ.
ಭಾನುವಾರದಿಂದ ಕಾಣೆಯಾಗಿದ್ದ ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಯ ಶವ ಪತ್ತೆಯಾಗಿರುವುದನ್ನು ಟಿಪ್ಪೆಕಾನೋ ಕೌಂಟಿ ಕರೋನರ್ ಅವರ ಕಚೇರಿ ಧೃಢಪಡಿಸಿದೆ.
ಟಿಪ್ಪೆಕಾನೋ ಕೌಂಟಿ ಕರೋನರ್ ಅವರ ಕಚೇರಿಯ ಪ್ರಕಾರ, ಮೃತ ದೇಹ ಪತ್ತೆಗಾಗಿ ವೆಸ್ಟ್ ಲಫಯೆಟ್ಟೆಯ 500 ಆಲಿಸನ್ ರಸ್ತೆಗೆ ಅಧಿಕಾರಿಗಳನ್ನು ಕರೆತರಲಾಯಿತು. ಬಳಿಕ ಪರ್ಡ್ಯೂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಕಾಲೇಜು ವಯಸ್ಸಿನ ಯುವಕ ಮೃತಪಟ್ಟಿರುವುದು ಕಂಡುಬಂದಿದೆ.
ಅಧಿಕಾರಿಗಳು ಮೃತ ವಿದ್ಯಾರ್ಥಿಯನ್ನು ನೀಲ್ ಆಚಾರ್ಯ ಎಂದು ಗುರುತಿಸಿದ್ದಾರೆ.
ಮೃತ ವಿದ್ಯಾರ್ಥಿ ನೀಲ್ ಆಚಾರ್ಯ ಅವರ ಮೃತದೇಹ ದೊರಕುವ ಮುನ್ನ ಅವರ ತಾಯಿ ಗೌರಿ ಆಚಾರ್ಯ ಅವರು ಮಗ ಕಾಣೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. "ನಮ್ಮ ಮಗ ನೀಲ್ ಆಚಾರ್ಯ ನಿನ್ನೆ ಜ 28 ರಿಂದ ಕಾಣೆಯಾಗಿದ್ದಾರೆ. ಆತ ಯುಎಸ್ ನ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಆತನನ್ನು ಪರ್ಡ್ಯೂ ವಿಶ್ವವಿದ್ಯಾನಿಲಯಕ್ಕೆ ಡ್ರಾಪ್ ಮಾಡಿದ ಉಬರ್ ಡ್ರೈವರ್ ಕೊನೆಯದಾಗಿ ನೋಡಿದ್ದಾನೆ. ಆತನ ಕುರಿತಂತೆ ನಾವು ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ. ಏನಾದರೂ ತಿಳಿದಿದ್ದರೆ ದಯವಿಟ್ಟು ನಮಗೆ ಸಹಾಯ ಮಾಡಿ." ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದರು.
ಪರ್ಡ್ಯೂ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಮತ್ತು ನೀಲ್ ಅವರ ಕುಟುಂಬದೊಂದಿಗೆ ಭಾರತದ ಕಾನ್ಸುಲೇಟ್ ಸಂಪರ್ಕದಲ್ಲಿದೆ. ನಮಗೆ ಸಾಧ್ಯವಾಗುವ ಎಲ್ಲಾ ಬೆಂಬಲ ಹಾಗೂ ಸಹಾಯವನ್ನು ಮಾಡುತ್ತೇವೆ ಎಂದು ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದರು.