ನ್ಯೂಯಾರ್ಕ್, ಮಾ 19(DaijiworldNews/AA): ಆಂಧ್ರಪ್ರದೇಶ ಮೂಲದ 20ವರ್ಷದ ವಿದ್ಯಾರ್ಥಿನೋರ್ವನ ಮೃತದೇಹವು ಕಾಡಿನ ಮಧ್ಯೆ ದೊರೆತ ಘಟನೆ ಅಮೇರಿಕಾದ ಬೋಸ್ಟನ್ ನಗರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿ ಅಭಿಜಿತ್ ಪರುಚುರು ಅವರು ಆಂಧ್ರಪ್ರದೇಶದ ಗುಂಟೂರು, ಬುರ್ರಿಪಾಲೆಮ್ ಮೂಲದವರು. ಅವರು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಅಭಿಜಿತ್ ಅವರ ಮೇಲೆ ದಾಳಿ ನಡೆಸಿದವರ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭಿಸಿಲ್ಲ. ಕಾಲೇಜು ಕ್ಯಾಂಪಸ್ ಒಳಗಿನ ಅರಣ್ಯದಲ್ಲಿದ್ದ ಕಾರಿನ ಒಳಗಡೆ ಅವರ ಮೃತದೇಹ ಪತ್ತೆಯಾಗಿದೆ. ಹಣ ಹಾಗೂ ಲ್ಯಾಪ್ ಟಾಪ್ ಗಾಗಿ ಅಭಿಜಿತ್ ಮೇಲೆ ದಾಳಿ ನಡೆಸಿರಬಹುದೆಂದು ಎಂದು ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಅಭಿಜಿತ್ ಅವರ ಹತ್ಯೆಯು ಸಾಕಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಅಭಿಜಿತ್ ಬೇರೆ ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಸಿದ್ದು, ಇದೇ ಅವರ ಹತ್ಯೆಗೆ ಕಾರಣವಾಗಿರಬಹುದು ಎಂದು ವಿಶ್ವವಿದ್ಯಾಲಯ ಅನುಮಾನ ವ್ಯಕ್ತಪಡಿಸಿದೆ. ಇನ್ನು ಅಭಿಜಿತ್ ಪರುಚುರು ಚಂದ್ರಶೇಖರ್ ಹಾಗೂ ಶ್ರೀಲಕ್ಷ್ಮೀ ಅವರ ಏಕೈಕ ಪುತ್ರನಾಗಿದ್ದಾನೆ. ಅಭಿಜಿತ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಗುಂಟೂರಿನ ಬುರ್ರಿಪಾಲೆಮ್ ನಲ್ಲಿ ಶುಕ್ರವಾರ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಮೇರಿಕದಲ್ಲಿ ಪದೇ ಪದೇ ಭಾರತೀಯರ ಮೇಲೆ ದಾಳಿಗಳಾಗುತ್ತಿದ್ದು, ಅಭಿಜಿತ್ ಹತ್ಯೆಯು 9ನೇ ಪ್ರಕರಣವಾಗಿದೆ.