ವಾಷಿಂಗ್ಟನ್, ಮಾ 28(DaijiworldNews/ AK): ಅಮೆರಿಕದ ಬಾಲ್ಟಿಮೋರ್ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ನೀರಿನಲ್ಲಿ ಮುಳುಗಿ ಆರು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅವಘಡದಲ್ಲಿ ನಾಪತ್ತೆಯಾದವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.
ಭಾರತೀಯ ಸಿಬ್ಬಂದಿ ಕಂಟೈನರ್ ಹಡಗು ಡಾಲಿಯನ್ನು ನಿರ್ವಹಿಸುತ್ತಿದ್ದರು. ಸಿಬ್ಬಂದಿ ನಿಯಂತ್ರಣ ತಪ್ಪಿದ ಹಡಗು ಸೇತುವೆಗೆ ಡಿಕ್ಕಿ ಹೊಡೆದಿತ್ತು. ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಸೇತುವೆಯ ಮೇಲೆ ರಿಪೇರಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾಣೆಯಾಗಿದ್ದಾರೆ.
ನೀರಿನ ತಾಪಮಾನ ಹಾಗೂ ಪರಿಸ್ಥಿತಿ ಅವಲೋಕಿಸಿದರೆ ಅವರು ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಯುಎಸ್ ಕೋಸ್ಟ್ ಗಾರ್ಡ್ ರಿಯರ್ ಅಡ್ಮಿರಲ್ ಶಾನನ್ ಗಿಲ್ರೆಥ್ ತಿಳಿಸಿದ್ದಾರೆ.
ಭಾರತ ವಿದೇಶಾಂಗ ಸಚಿವಾಲಯ ಅಪಾಯದಲ್ಲಿದ್ದ ಭಾರತೀಯ ಸಿಬ್ಬಂದಿಗೆ ಅಗತ್ಯ ಸಹಾಯದ ಭರವಸೆ ನೀಡಿದೆ. ದುರಂತಕ್ಕೆ ಸಿಲುಕಿ ಕಣ್ಮರೆಯಾದವರಿಗೆ ಸಂತಾಪಗಳನ್ನು ಕಚೇರಿಯು ಸೂಚಿಸಿದೆ.
ಮಂಗಳವಾರ ಮಧ್ಯರಾತ್ರಿಯ ಸುಮಾರಿಗೆ ಹಡಗು ತನ್ನ ದಿಕ್ಕನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಅಮೆರಿಕ ಸೇತುವೆಗೆ ಡಿಕ್ಕಿ ಹೊಡೆಯಿತು. ಅವಘಡದಲ್ಲಿ 1977 ರ ಸೇತುವೆಯು ಕುಸಿದು ಬಿದ್ದಿತ್ತು.