ಇಸ್ಲಾಮಾಬಾದ್, ಮಾ 30(DaijiworldNews/AA): ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಇದೀಗ ಪೆಟ್ರೋಲ್ ದರವನ್ನು ಏರಿಕೆ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು ಸುಮಾರು 10 ಪಾಕಿಸ್ತಾನಿ ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ಪೆಟ್ರೋಲ್ ಲೀಟರ್ ಗೆ 279.75 ಪಾಕ್ ರೂಪಾಯಿಯಷ್ಟಿದೆ. ಆದರೆ ಮುಂದಿನ 15 ದಿನಗಳಲ್ಲಿ ಲೀಟರ್ ಪೆಟ್ರೋಲ್ ಗೆ 289.69 ಪಾಕ್ ರೂಪಾಯಿಯಷ್ಟು ಹೆಚ್ಚಳವಾಗಲಿದೆ ಎಂದು ವರದಿ ತಿಳಿಸಿದೆ.
ಇನ್ನೊಂದೆಡೆ ಹೈಸ್ಪೀಡ್ ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ 1.30 ಪಾಕ್ ರೂಪಾಯಿಯಷ್ಟು ಇಳಿಕೆ ಮಾಡಿದೆ. ಈ ಹಿನ್ನೆಲೆ ಪ್ರತಿ ಲೀಟರ್ ಗೆ 285.86 ರೂಪಾಯಿಯಷ್ಟಿದ್ದ ಹೈಸ್ಪೀಡ್ ಡೀಸೆಲ್ ದರ ಇದೀಗ 284.26 ರೂಪಾಯಿ ತಲುಪಿದೆ.