ಫ್ಲೋರಿಡಾ, ಮೇ 04 (Daijiworld News/MSP): ಬೋಯಿಂಗ್ 737 ವಿಮಾನವೊಂದು ಲ್ಯಾಂಡಿಂಗ್ ಸಂದರ್ಭ ನದಿಗೆ ಇಳಿದ ಘಟನೆ ಶುಕ್ರವಾರ ರಾತ್ರಿ ವೇಳೆ ನಡೆದಿದೆ.
ಕ್ಯೂಬಾದಿಂದ ಆಗಮಿಸಿದ ಬೋಯಿಂಗ್ 737 ವಿಮಾನ ಫ್ಲೋರಿಡಾದ ಜ್ಯಾಕ್ಸನ್ವಿಲ್ ಬಳಿಯ ನೌಕಾ ನೆಲೆಯಲ್ಲಿ ಇಳಿಯುವಾಗ ರಾತ್ರಿ 9.30 ರ ವೇಳೆಗೆ ಲ್ಯಾಂಡ್ ಮಾಡುವ ಸಂದರ್ಭ ಸಮೀಪದಲ್ಲಿದ್ದ ಸೇಂಟ್ ಜಾನ್ಸ್ ನದಿಯೊಳಗೆ 136 ಜನರನ್ನು ಹೊತ್ತಿದ್ದ ವಿಮಾನ ನಿಯಂತ್ರಣ ತಪ್ಪಿ ಇಳಿದಿದೆ.
ಈ ಬಗ್ಗೆ ಜಾಕ್ಸನ್ವಿಲ್ ನೌಕಾ ವಾಯು ನಿಲ್ದಾಣದ ವಕ್ತಾರ ಅಧಿಕೃತವಾಗಿ ಮಾಹಿತಿ ನೀಡಿದ್ದು, ಅದೃಷ್ಟವಶಾತ್ ಸಾವು - ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ.
ವಿಮಾನದಲ್ಲಿದ್ದ ಎಲ್ಲರೂ ಜೀವಂತವಾಗಿದ್ದು, ಯಾವುದೇ ಜೀವ ಹಾನಿ ಆಗಿಲ್ಲ . ಸಿಬ್ಬಂದಿಗಳು ಜೆಟ್ ಇಂಧನವನ್ನು ನಿಯಂತ್ರಿಸಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಾಕ್ಸನ್ವಿಲ್ ಮೇಯರ್ ಅವರು ಟ್ವೀಟ್ ಮಾಡಿದ್ದಾರೆ.
ವಿಮಾನ ಮುಳುಗಡೆಯಾಗಿಲ್ಲ ಎಂದು ಜಾಕ್ಸನ್ವಿಲ್ ಶೆರಿಫ್ ಕಚೇರಿ ಟ್ವೀಟ್ ಮಾಡಿದೆ. ಮುಳುಗುತಜ್ಞರು ಸೇರಿದಂತೆ ರಕ್ಷಣಾ ಪಡೆಗಳು ಆಗಮಿಸಿ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ ಎಂದು ತಿಳಿದುಬಂದಿದೆ.